ADVERTISEMENT

ವಿಶ್ವ ಮಾರುಕಟ್ಟೆಯೊಂದಿಗೆ ಸ್ಪರ್ಧಿಸಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:55 IST
Last Updated 8 ಅಕ್ಟೋಬರ್ 2012, 8:55 IST

ಕುಂದಾಪುರ: `ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಭಾರತ, 21ನೇ ಶತಮಾನದ ಸ್ಪರ್ಧಾತ್ಮಕ ಮನೋಭಾವ, ಕ್ರಾಂತಿಯುತ ಬೆಳವಣಿಗೆಯ ಜೊತೆ ಗುಣಮಟ್ಟವನ್ನು ಕಾಯ್ದುಕೊಂಡು ಯಶಸ್ವಿಯಾಗಬೇಕಾದರೆ ವಿಶ್ವ ಮಾರುಕಟ್ಟೆಯೊಂದಿಗೆ ಸ್ಪರ್ಧಿಸಲು ನಾವು ಸಿದ್ಧರಿರಬೇಕು~ ಎಂದು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

ವಿಶ್ವ ಕೊಂಕಣಿ ಕೇಂದ್ರ ಮಂಗಳೂರು, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ ಮಂಗಳೂರು ಹಾಗೂ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಮಹಾಜನ ಸಭಾದ ಜಂಟಿ ಆಶ್ರಯದಲ್ಲಿ ಇಲ್ಲಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಅವರು ಮಾತನಾಡಿದರು.

ಸರ್ಕಾರ, ಕೆಲವು ಖಾಸಗಿ ಸಂಸ್ಥೆಗಳು ಮತ್ತು ದಾನಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ, ಪ್ರಾಶಸ್ತ್ಯ ನೀಡುತ್ತಿದ್ದು ವಿದ್ಯಾದಾನ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಿಂದೆ ಸೀಮಿತ ಶಿಕ್ಷಣ ವ್ಯವಸ್ಥೆಗಳು ಇದ್ದುದರಿಂದ ಒಳ್ಳೆಯ ಶಿಕ್ಷಣಗಳು ಸಮಾಜದ ಒಂದು ವರ್ಗಕ್ಕೆ ಮಾತ್ರ ಮೀಸಲಾಗಿರುತ್ತಿತ್ತು, ಬದಲಾದ ಈ ಕಾಲಘಟ್ಟದಲ್ಲಿ ಶಿಕ್ಷಣ ಒಂದು ಗುಂಪಾಗಿ ಬೆಳೆಯುತ್ತಿರುವುದರಿಂದ ಎಲ್ಲಾ ವರ್ಗದವರಿಗೂ ಶಿಕ್ಷಣದ ಅವಕಾಶ ದೊರಕುತ್ತಿದೆ ಎಂದು ಮಾಜಿ ಸಚಿವರೂ ಆಗಿರುವ ದೇಶಪಾಂಡೆ ಹೇಳಿದರು.

ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ಅಧ್ಯಕ್ಷ ರಾಮದಾಸ್ ಕಾಮತ್ ಅವರು ಕೊಂಕಣಿ ಸಮಾಜದ ಸುಮಾರು 3ಸಾವಿರ ಕುಟುಂಬಗಳಿಗೆ ವಿಮೆ ಭದ್ರತೆ ಒದಗಿಸಿದ್ದು, ವೈದ್ಯಕೀಯ ವಿಮೆಯ ಬಗ್ಗೆಯೂ ಗಮನ ಹರಿಸಲಾಗಿದೆ. ವಿದ್ಯಾರ್ಥಿ ವೇತನವನ್ನು ಹೆಚ್ಚಿಸುವುದು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತಹ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಕೆ.ಬಿ.ಖಾರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಶುಭ ಹಾರೈಸಿದರು. ಗಂಗೊಳ್ಳಿಯ ಉದ್ಯಮಿ ಕಾಂತು ಮಂಜುನಾಥ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ನಾಗ ಖಾರ್ವಿ, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ವೆಂಕಟೇಶ ಎನ್.ಬಾಳಿಗಾ, ವಿದ್ಯಾರ್ಥಿ ನಿಧಿ ಕಾರ್ಯದರ್ಶಿ ಪ್ರದೀಪ ಜಿ.ಪೈ ಮೊದಲಾದವರು ಉಪಸ್ಥಿತರಿದ್ದರು.

ಮೋಹನ ಬಾನಾವಳಿಕರ್ ಸ್ವಾಗತಿಸಿದರು. ಗುರುದತ್ ಬಂಟ್ವಾಳಕರ್ ಹಾಗೂ ವಸಂತ ಖಾರ್ವಿ ಭಟ್ಕಳ್ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ವಿವರಗಳನ್ನು ನೀಡಿದರು. ಮಾಲಿನಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು, ಉಮಾನಾಥ ಗಂಗೊಳ್ಳಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.