ADVERTISEMENT

ಶೈಕ್ಷಣಿಕ ಸುಧಾರಣೆ- 3ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:25 IST
Last Updated 13 ಅಕ್ಟೋಬರ್ 2011, 5:25 IST

ಮಂಗಳೂರು: ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಪಾರಂಪರಿಕ ಹಿನ್ನೆಲೆ ಇದೆ. ದೇಶ ಶೈಕ್ಷಣಿಕ ಸುಧಾರಣೆಯಲ್ಲಿ ಪ್ರಪಂಚದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಟಿ.ಸಿ.ಶಿವಶಂಕರಮೂರ್ತಿ ಹೇಳಿದರು.

ನಗರದ ಎಸ್‌ಡಿಎಂ ವ್ಯವಹಾರ ಆಡಳಿತ ಕಾಲೇಜು ಆಶ್ರಯದಲ್ಲಿ ಬುಧವಾರ ನಡೆದ `ಡಬ್ಲ್ಯೂಟಿಒ ಒಪ್ಪಂದದಿಂದ ಉನ್ನತ ಶಿಕ್ಷಣದಲ್ಲಿ ಬದಲಾವಣೆ~ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಕೇವಲ 28 ವಿಶ್ವವಿದ್ಯಾಲಯ ಮತ್ತು 48 ಕಾಲೇಜು ಇದ್ದವು. ಪ್ರಸ್ತುತ 540 ವಿಶ್ವವಿದ್ಯಾಲಯಗಳಿವೆ. ಆದರೆ ಕೇವಲ ಶೇ. 12.4ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಶೇ. 26ರಷ್ಟು ಇನ್ನೂ ಅನಕ್ಷರಸ್ಥರಾಗಿಯೇ ಇದ್ದಾರೆ ಎಂದರು.

ಜ್ಞಾನ ಆಯೋಗದ ವರದಿಯಂತೆ ಭಾರತದಲ್ಲಿ 2020ಕ್ಕೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ. 30ಕ್ಕೆ  ಹೆಚ್ಚಬೇಕು ಮತ್ತು ಒಂದು ಸಾವಿರ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 50 ಸಾವಿರ ಕಾಲೇಜುಗಳಿರಬೇಕು. ಒಂದೊಮ್ಮೆ ಇದಾಗದಿದ್ದರೆ ಉನ್ನತ ಶಿಕ್ಷಣಕ್ಕೆ ಭವಿಷ್ಯವೇ ಇಲ್ಲ ಎಂದೇ ಅರ್ಥ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಪೊರೇಷನ್ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ಬಿ.ಆರ್.ಭಟ್ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಡಬ್ಲ್ಯೂಟಿಒ ಒಪ್ಪಂದದಿಂದ ಉನ್ನತ ಶಿಕ್ಷಣದ ಮೇಲೆ ಮಹತ್ತರವಾದ ಪರಿಣಾಮವಾಗಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಿದೆ ಎಂದರು.

ಬಳ್ಳಾರಿ ವಿಜಯ ನಗರ ವಿಶ್ವವಿದ್ಯಾಲಯ ಕುಲಸಚಿವ ಯಶವಂತ್ ಡೋಂಗ್ರೆ ದಿಕ್ಸೂಚಿ ಭಾಷಣ ಮಾಡಿದರು. ಶ್ರೀದೇವಿ ಕಾಲೇಜು ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆ ಶರ್ಮಿಳಾ ಮುಖ್ಯ ಅತಿಥಿಯಾಗಿದ್ದರು. ಕಾಲೇಜು ಪ್ರಾಚಾರ್ಯ ದೇವರಾಜ್, ಅರುಣಾ ಕಾಮತ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.