ADVERTISEMENT

ಸಂತ್ರಸ್ತ ದಲಿತರತ್ತ ಮಾನವೀಯ ಸ್ಪಂದನ

ಶಾಲಾ ಮುಖ್ಯಸ್ಥನ ಕಳಕಳಿ, ಆಹಾರದ ಕೊಡುಗೆ-ಮಗುವಿನ ದತ್ತು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:45 IST
Last Updated 22 ಜೂನ್ 2013, 12:45 IST

ಬಜ್ಪೆ: ಇಲ್ಲಿನ ತೊಟ್ಟಿಲಗುರಿಯಲ್ಲಿ ಆವರಣ ಗೋಡೆ ಕುಸಿದು ಮನೆಮಠ ಕಳೆದುಕೊಂಡಿರುವ ಸಂತ್ರಸ್ತ ದಲಿತ ಕುಟುಂಬದವರ ಬಗ್ಗೆ ಮಾನವೀಯವಾಗಿ ಸ್ಪಂದಿಸುವ ಕೆಲಸವನ್ನು ಪಾಪ್ಯುಲರ್ ಬಂಟ್ಸ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯಾಧ್ಯಕ್ಷ ಹಾಗೂ ಸಂಚಾಲಕ ಪಾಪ್ಯುಲರ್ ಜಗನ್ನಾಥ ಸಿ. ಶೆಟ್ಟಿ ಮಾಡಿದ್ದು, ಆಹಾರದ ಕೊಡುಗೆಯ ಜತೆಗೆ, ತಬ್ಬಲಿ ಬಾಲಕ ರವಿಶಂಕರ್‌ನ ಮುಂದಿನ ಸಂಪೂರ್ಣ ವಿದ್ಯಾಭ್ಯಾಸಕ್ಕಾಗಿ ಆತನನ್ನು ದತ್ತು ತೆಗೆದುಕೊಂಡಿದ್ದಾರೆ.

ಮಳವೂರಿನಲ್ಲಿರುವ ತಮ್ಮ ಶಾಲೆಗೆ ಗುರುವಾರ ಸಂತ್ರಸ್ತ ಕುಟುಂಬದವರನ್ನೆಲ್ಲ ಕರೆಸಿಕೊಂಡ ಜಗನ್ನಾಥ ಶೆಟ್ಟ ಅವರು ಅವರಿಗೆ ನಗದು, ಅಕ್ಕಿ, ಮನೆ ಸಾಮಗ್ರಿ, ಚಾಹುಡಿ, ಸಕ್ಕರೆ, ತೆಂಗಿನಕಾಯಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿ ಮಾದರಿಯಾದರು.

`ದುರಂತದಲ್ಲಿ ಜೀವ ಮತ್ತು ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ಕಿಂಚಿತ್ ಸಹಾಯ ಮಾಡಬೇಕೆಂಬ ಅಪೇಕ್ಷೆಯಿಂದ ನನ್ನ ಕೈಲಾಗುವ ಕಾರ್ಯವನ್ನು ಮಾಡುತ್ತಿದ್ದೇನೆ. ಬಜ್ಪೆಯಲ್ಲಿ ನಡೆದಂತಹ ದುರಂತ ಬೇರೆಡೆ ನಡೆಯಬಾರದು. ನಮ್ಮ ಶಾಲೆಯಲ್ಲೂ ಬಡ ಮತ್ತು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ ನೀಡಲಾಗುತ್ತಿದೆ' ಎಂದು ಜಗನ್ನಾಥ ಶೆಟ್ಟಿ ಹೇಳಿದರು.

`ಅನಾಥನಾಗಿರುವ ರವಿಶಂಕರ್‌ನನ್ನು ನಮ್ಮ ಶಾಲೆಯಲ್ಲಿ ಉಚಿತವಾಗಿ ಓದಿಸಲಾಗುವುದು. ಆತನ ಸಕಲ ಖರ್ಚು ವೆಚ್ಚಗಳನ್ನು ನಾನೇ ವಹಿಸಿಕೊಳ್ಳಲಿದ್ದೇನೆ' ಎಂದು ಅವರು ತಿಳಿಸಿದರು.

ಸಂತ್ರಸ್ತರಾದವರ ಹಲವು ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂಬ ವಿಷಯವೂ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂತು. ವಿದ್ಯೆಯಿಂದ ವಂಚಿತರಾದ ಸಂತ್ರಸ್ತ ಕುಟುಂಬಕ್ಕೆ ಶಿಕ್ಷಣ ದೊರಕಿಸಿಕೊಡುವ ಬಗ್ಗೆ ಇಲಾಖಾಧಿಕಾರಿಗಳು ತಕ್ಷಣ ಗಮನಿಸಬೇಕೆಂಬ ಒತ್ತಾಯವೂ ಕೇಳಿಬಂತು.

ರೆಡ್‌ಕ್ರಾಸ್ ನೆರವು: ದುರಂತದಲ್ಲಿ ಮೃತರಾದ ಎರಡು ಕುಟುಂಬಗಳಿಗೆ ರೆಡ್ ಕ್ರಾಸ್ ಸಂಸ್ಥೆ ಮೂರು ಕಿಟ್‌ಗಳನ್ನು ನೀಡಿತು. ಅದರಲ್ಲಿ ಔಷಧ, ಬೆಡ್‌ಶೀಟ್, ಕುಕ್ಕರ್ ಹೀಗೆ ಮನೆ ಉಪಯೋಗಿ ಹಲವಾರು ಸಾಮಗ್ರಿಗಳಿದ್ದವು.

ಕಾರ್ಯಕ್ರಮದ ಆರಂಭದಲ್ಲಿ ದುರಂತದಲ್ಲಿ ಮಡಿದವರಿಗಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು. ರಾಮಚಂದ್ರ ಶೆಟ್ಟಿ, ಬಿ.ಜೆ ರಹೀಂ, ಬಜ್ಪೆ ಮಾಜಿ ಪಂಚಾಯಿತಿ. ಅಧ್ಯಕ್ಷ ಸಾಹುಲ್ ಹಮೀದ್, ಉಮೇಶ್ ರಾವ್ ಎಕ್ಕಾರ್, ಕಂದಾಯ ಅಧಿಕಾರಿ ನವೀನ್, ಶರೀಫ್, ಸುಮತಿ ಶೆಟ್ಟಿ, ವೇದಾವತಿ, ಸಿರಾಜ್ ಅಹಮ್ಮದ್ ಮತ್ತಿತರರು ಇದ್ದರು. ಶಾಲಾ ಮುಖ್ಯ ಶಿಕ್ಷಕಿ ಸಹನಾ ಎಂ. ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.