ADVERTISEMENT

ಸಂಪರ್ಕ ರಸ್ತೆಯಲ್ಲಿ ಬಾಯಿ ತೆರೆದ ಹೊಂಡ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 9:45 IST
Last Updated 9 ಜೂನ್ 2011, 9:45 IST

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಪೇಟೆಯಿಂದ ಬಜ್ಪೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡ ಹೊಂಡವೊಂದು ಬಾಯ್ದೆರೆದು ಕುಳಿತಿದೆ. ಪ್ರತಿ ದಿನ ಸಾವಿರಾರು ವಾಹನಗಳು, ಪಾದಚಾರಿಗಳು ಓಡಾಡುವ ಜಾಗದಲ್ಲಿರುವ ಈ ಹೊಂಡ ಮರಣ ಗುಂಡಿಯಾಗುವ ಸಾಧ್ಯತೆ ಕಂಡುಬಂದಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಇರ್ಕಾನ್ ಮಂದಗತಿಯಲ್ಲಿ ನಡೆಯತ್ತಿರುವ ಬಗ್ಗೆ ಸಾರ್ವಜನಿಕರಿಂದ ಈಗಾಗಲೇ ಆಕ್ಷೇಪಗಳು ವ್ಯಕ್ತವಾಗಿದೆ. ಇರ್ಕಾನ್ ಕಾಮಗಾರಿಯ ಇನ್ನೊಂದು ಮುಖವನ್ನು ಈ ಮರಣಗುಂಡಿ ಸಾರ್ವಜನಿಕರಿಗೆ ತೋರಿಸಿದೆ.  ಸರ್ವಿಸ್ ರಸ್ತೆ ಮತ್ತು ಹೆದ್ದಾರಿ ನಡುವೆ ನಿರ್ಮಿಸುವ ಚರಂಡಿಗೆ ಮುಚ್ಚಿರುವ ಕಾಂಕ್ರೀಟ್ ಹಾಸುಕ್ಲ್ಲಲು ಮುರಿದ ಪರಿಣಾಮ  ಈ ಮರಣಗುಂಡಿ ಸೃಷ್ಟಿಯಾಗಿದ್ದು ಕಾಂಕ್ರೀಟ್ ಹಾಸುಕಲ್ಲಿನ  ಗುಣಮಟ್ಟದ ಬಗ್ಗೆ ಪ್ರಶ್ನಿಸುವಂತಾಗಿದೆ.

ಚರಂಡಿಗೆ ಕಾಂಕ್ರೀಟ್ ಹಾಸುಕಲ್ಲನ್ನು ಮುಚ್ಚಿ ಡಾಮರೀಕರಣ ಮಾಡಲಾಗಿದ್ದರೂ ವಾಹನಗಳ ಸಂಚಾರದ ಒತ್ತಡಕ್ಕೆ ಹಾಸುಕಲ್ಲು ಮುರಿದು ಬಿದ್ದು ಹೊಂಡ ಉಂಟಾಗಿದೆ. ಹೊಂಡಗಳು ಬಿದ್ದು ಹಲವು ದಿನಗಳು ಕಳೆದರೂ ಹೆದ್ದಾರಿ ಇಲಾಖೆಯಾಗಲೀ, ಇರ್ಕಾನ್ ಆಗಲೀ ಇದನ್ನು ಮುಚ್ಚುವ ಕೆಲಸಕ್ಕೆ ಈವರೆಗೂ ಕೈಹಾಕಿಲ್ಲ, ಅಪಘಾತದ ಸಂಭವ ಅರಿತ ಕೆಲವು `ಹೃದಯವಂತ~ರು ಹೊಂಡಕ್ಕೆ ಮರದ ಗೆಲ್ಲುಗಳನ್ನು ನೆಟ್ಟು ವಾಹನ ಸವಾರರಿಗೆ ಎಚ್ಚರಿಕೆಯ ಸುಳಿವನ್ನು ನೀಡಿದ್ದಾರೆ.

ಉಡುಪಿ ಹಾಗೂ ಮಂಗಳೂರು ಕಡೆಯಿಂದ ಬಜ್ಪೆ, ಎಂಆರ್‌ಪಿಎಲ್ ಕಡೆಗೆ ಸಂಚರಿಸಬೇಕಾದ ವಾಹನಗಳು ಈ ರಸ್ತೆಯಲ್ಲೇ ತಿರುವು ಪಡೆಯಬೇಕಿದೆ. ಆಯತಪ್ಪಿದರೆ ಹೊಂಡಕ್ಕೆ ಬೀಳುವ ಸಂಭವ ಹೆಚ್ಚು, ಈ ಹೊಂಡ ಯಮಲೋಕಕ್ಕೆ ದಾರಿತೋರಿಸುವ ತಿರುವಾಗಿ ಪರಿಣಮಿಸುತ್ತಿದೆ. ವಾಹನಗಳ ಒತ್ತಡವೂ ಈ ರಸ್ತೆಯಲ್ಲಿ ಹೆಚ್ಚಿರುವುದರಿಂದ ಪದಾಚಾರಿಗಳಿಗೆ ರಸ್ತೆ ದಾಟಲೂ  ಹೊಂಡದಿಂದ ಅಡಚಣೆಯಾಗಿದೆ. ಹೆದ್ದಾರಿ ಇಲಾಖೆ ಮಾತ್ರ ಗಾಢ ನಿದ್ರೆಗೆ ಜಾರಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ.

ಪಾಲಿಕೆ ಸದಸ್ಯೆ ವಿರುದ್ದವೂ ಆಕ್ರೋಶ: ಈ ರಸ್ತೆ ಹೊಂದಿರುವ ವಾರ್ಡ್ ಸದಸ್ಯೆ  ಮಾಜಿ ಮೇಯರ್ ರಜನಿ ದುಗ್ಗಣ್ಣ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳಲು ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದು ಹೆದ್ದಾರಿ ಇಲಾಖೆಗೆ ಸೂಚಿಸಲು ಪಾಲಿಕೆ ಸದಸ್ಯೆ ವಿಫಲರಾಗಿದ್ದಾರೆಯೇ ಎಂದು ಸ್ಥಳೀಯರಾದ ರಾಜೇಶ್ ಪ್ರಶ್ನಿಸಿದ್ದಾರೆ. ಸುರತ್ಕಲ್‌ನ ಕೇಂದ್ರ ಬಿಂದುವಾಗಿರುವ ಮಾರುಕಟ್ಟೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಸುಸ್ಥಿತಿ ಬಗ್ಗೆ ಗಮನ ಹರಿಸಬೇಕಾದ ಜವಬ್ದಾರಿ ಪಾಲಿಕೆ ಸದಸ್ಯೆಗಿದೆ ಎನ್ನುತ್ತಾರೆ. ಪಾಲಿಕೆಯಾದರೂ ಈ ಬಗ್ಗೆ ಕ್ರಮಕೈಗೊಂಡು ಹೊಂಡ ಮುಚ್ಚಿಸಿ ಹೊಸ ಹಾಸುಕಲ್ಲನ್ನು ಹಾಕುವತ್ತ ಗಮನಹರಿಸಬೇಕು ಎನ್ನುತ್ತಾರೆ.

ಹೆದ್ದಾರಿ ಇಲಾಖೆಯ ಜವಬ್ದಾರಿ: ಹೆದ್ದಾರಿ ಇಲಾಖೆ ಬೇಜವಬ್ದಾರಿಯಿಂದ ವರ್ತಿಸುತ್ತಿದೆ. ರಸ್ತೆ ನಿರ್ಮಿಸುವ ಗುತ್ತಿಗೆ ಪಡೆದಿರುವ ಇರ್ಕಾನ್ ಕಂಪೆನಿಯ ಕಾಮಗಾರಿಯ ಬಗ್ಗೆ ಉಸ್ತುವಾರಿಯನ್ನು ಹೆದ್ದಾರಿ ಇಲಾಖೆ ನೋಡಬೇಕಿದೆ.  ಹೆದ್ದಾರಿಯ ಹೊಂಡ ಮುಚ್ಚುವ ಕಾರ್ಯ ಇರ್ಕಾನ್ ಜವಬ್ದಾರಿಯಾಗಿದ್ದು ಪಾಲಿಕೆ ಮದ್ಯಪ್ರವೇಶಿಸುವಂತಿಲ್ಲ ಎಂದು ಪಾಲಿಕೆ ಎಂಜಿನಿಯರ್ ಒಬ್ಬರು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡರು.

ರಸ್ತೆ ಗ್ಯಾಂಗ್ ರಚಿಸಬೇಕು: ಪಾಲಿಕೆ ವ್ಯಾಪ್ತಿಯ ಹೆದ್ದಾರಿ, ರಸ್ತೆಗಳಲ್ಲಿ ಹೊಂಡಗಳನ್ನು ಮುಚ್ಚಲು, ರಸ್ತೆಯನ್ನು ಸುಸ್ಥಿತಿಯಲ್ಲಿಡಲು ರಸ್ತೆ ಗ್ಯಾಂಗ್ ರಚಿಸಬೇಕು. ಈ ತಂಡಕ್ಕೆ ಪಾಲಿಕೆ ಎಲ್ಲಾ ವ್ಯವಸ್ಥೆಯನ್ನು ಒದಗಿಸಬೇಕು, ಯಾವುದೇ ರಸ್ತೆಯೂ ಹದಗೆಟ್ಟರೂ ರಿಪೇರಿ ಮಾಡುವ ಜವಬ್ದಾರಿಯನ್ನು ಈ ಗ್ಯಾಂಗ್‌ಗೆ ನೀಡಬೇಕು. ಪಾಲಿಕೆಗೆ ಇಚ್ಚಾಶಕ್ತಿಯಿದ್ದರೆ ಇದು ಸಾಧ್ಯ ಎಂದು ಪಾಲಿಕೆ ಸದಸ್ಯ ಹರೀಶ್ ಹೇಳುತ್ತಾರೆ.
ನಾಗರಾಜ ಶೆಟ್ಟಿಗಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.