ಸುಳ್ಯ: ಆಧುನಿಕ ವೇಗದ ಬದುಕಿನಲ್ಲಿ ಸಂಸ್ಕಾರ ಮುಖ್ಯ. ಅದು ಇಲ್ಲದೆ ಹೋದರೆ ಸಮಾಜಕ್ಕೆ ಮಾರಕ. ಈ ನಿಟ್ಟಿನಲ್ಲಿ ಸಂಸ್ಕಾರ, ಸಾಂಸ್ಕೃತಿಕ ಮೌಲ್ಯವನ್ನು ನೀಡುವ ಶಿಕ್ಷಣ ಇಂದು ಹೆಚ್ಚು ಅಗತ್ಯ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಹೇಳಿದ್ದಾರೆ.
ಗುರುವಾರ ಅಡ್ಕಾರಿನ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ, ಭಯೋತ್ಪಾದನೆಗಳಲ್ಲಿ ಉನ್ನತ ಶಿಕ್ಷಣ ಹೊಂದಿದವರೇ ಪಾಲ್ಗೊಳ್ಳುವ ಮೂಲಕ ಅವ್ಯವಸ್ಥೆಗಳಿಗೆ ಕಾರಣರಾಗುತ್ತಾರೆ. ಕೇವಲ ಉನ್ನತ ಶಿಕ್ಷಣ ಪಡೆದರೆ ಪ್ರಯೋಜನವಿಲ್ಲ. ಸ್ವಾಮಿ ವಿವೇಕಾನಂದರನ್ನು ಮಾದರಿಯನ್ನಾಗಿ ಇಟ್ಟುಕೊಂಡು ಶಿಕ್ಷಣ ನೀಡಬೇಕು. ಈ ದಿಸೆಯಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಶ್ರಮಿಸುತ್ತಿದೆ ಎಂದವರು ಹೇಳಿದರು.
ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ 18 ಕೇಂದ್ರಗಳಲ್ಲಿ ಒಟ್ಟು 65 ವಿದ್ಯಾಸಂಸ್ಥೆಗಳು ಕಾರ್ಯಾಚರಿಸುತ್ತಿವೆ. 19,500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 1000 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ವ್ಯಕ್ತಿ, ಕುಟುಂಬ, ಜಾತಿಗೆ ಸೀಮಿತವಾಗದೇ, ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡುವ ಸ್ಪಷ್ಟ ಕಲ್ಪನೆಯೊಂದಿಗೆ ಸಂಸ್ಥೆ ಆರಂಭವಾಗಿದೆ. 11 ಮಂದಿ ಆಡಳಿತ ನಿರ್ದೇಶಕರಿದ್ದು, ಅವರಲ್ಲಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳೇ 9 ಜನರಿದ್ದಾರೆ ಎಂದರು.
ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ನೂತನ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದರು. ಕೆನರಾ ಬ್ಯಾಂಕ್ ಕೊಡುಗೆಯಾಗಿ ನೀಡಿದ 10 ಕಂಪ್ಯೂಟರ್‌ಗಳನ್ನು ಶಾಖಾಧಿಕಾರಿ ಶ್ರಿಧರ ಪೂಜಾರಿ ಹಸ್ತಾಂತರಿಸಿದರು.
ಅಮೇರಿಕಾದಲ್ಲಿ ನೆಲೆಸಿರುವ ಸ್ನೇಹ ಮೇಲುಕೋಟೆಯವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವರ್ಗಕ್ಕೆ ಕೊಡುಗೆಯಾಗಿ ನೀಡಿದ ಸಮವಸ್ತ್ರಗಳನ್ನು ರವಿಪ್ರಕಾಶ್ ಅಟ್ಲೂರು ವಿತರಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಸದಸ್ಯ ಕಿಶೋರ್ ಕುಮಾರ್ ಶಿರಾಡಿ, ಅಡ್ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ಗೌಡ, ಸದಸ್ಯ ಅಶೋಕ್ ಅಡ್ಕಾರು, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಭಟ್, ಆಡಳಿತ ಮಂಡಳಿಯ ಉಪೇಂದ್ರ ಕಾಮತ್, ಪದ್ಮಾವತಿ ಕಾಮತ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಸುಧಾಕರ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ್‌ರಾವ್ ಸ್ವಾಗತಿಸಿದರು. ಜಯಪ್ರಕಾಶ್ ಕಾರಿಂಜ ವಂದಿಸಿದರು. ಗೀತಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.