ADVERTISEMENT

‘ಸದ್ಯವೇ ನೆಲದಡಿ ವಿದ್ಯುತ್‌ ತಂತಿ ಅಳವಡಿಕೆ’

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 8:44 IST
Last Updated 17 ಅಕ್ಟೋಬರ್ 2017, 8:44 IST

ಮಂಗಳೂರು: ಮಂಗಳೂರು ಮಹಾನಗರವು ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್‌ ತಂತಿಗಳನ್ನು ನೆಲದಡಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಜೆ. ಆರ್‌. ಲೋಬೊ ಹೇಳಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ₹ 5.14 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವದ್ಧಿ ಕಾಮಗಾರಿಗಳಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರಸ್ತೆಯಂಚಿನಲ್ಲಿ ಇರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸ ಲಾಗುವುದು. ಈ ಕುರಿತು ₹50 ಕೋಟಿ ವೆಚ್ಚದಲ್ಲಿ ವಿಸ್ತೃತ ಅಧ್ಯಯನ ವರದಿ (ಡಿಪಿಆರ್‌) ಯನ್ನು ಮೆಸ್ಕಾಂ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ. ತಂತಿಗಳನ್ನು ನೆಲದಡಿ ಅಳವಡಿಸುವ ಪ್ರಕ್ರಿಯೆಗೆ ಸದ್ಯವೇ ಚಾಲನೆ ದೊರೆಯಲಿದೆ. ಮೇಯರ್‌ ಕವಿತ ಸನಿಲ್‌ ಅವರ ನೇತೃತ್ವದಲ್ಲಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ ಎಂದು ಅವರು ಹೇಳಿದರು.

ಮಂಗಳೂರು ನಗರ ಅಭಿವದ್ಧಿ ದೃಷ್ಟಿಯಿಂದ ಮುಂದಿನ ಮೂರು ವರ್ಷಗಳಲ್ಲಿ ₹ 2,500 ಕೋಟಿ ಅನುದಾನ ವಿವಿಧ ಮೂಲಗಳಿಂದ ಲಭ್ಯವಾಗಲಿದೆ. ₹ 1,000 ಕೋಟಿ ಸ್ಮಾರ್ಟ್‌ ಸಿಟಿ ಮೂಲಕ, ₹ 600 ಕೋಟಿ ಎಡಿಬಿ-2 ಯೋಜನೆಯ ಮೂಲಕ, ಪ್ರೀಮಿಯಂ ಎಫ್‌ಎಆರ್ ಮೂಲಕ ₹ 200 ಕೋಟಿ, ಅಮೃತ್ ಯೋಜನೆಯಲ್ಲಿ ₹ 200 ಕೋಟಿ ಸೇರಿದಂತೆ ವಿವಿಧ ಮೂಲಗಳಿಂದ ಅನುದಾನ ಸಂಗ್ರಹಿಸಿ ನಗರವನ್ನು ಅಭಿ ವೃದ್ಧಿಪಡಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಮಂಗಳೂರು ನಗರದ ಸಮಗ್ರ ಚಿತ್ರಣ ಬದಲಾಗಲಿದೆ ಎಂದರು.

ADVERTISEMENT

ನದಿ ತೀರದ ಅಭಿವದ್ಧಿ ಯೋಜನೆ, ನಗರದೊಳಗೆ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಬೇರೆ ಬೇರೆ ಯೋಜನೆಗಳನ್ನು ಜಾರಿ ಗೊಳಿಸಲಾಗುವುದು. ಮಂಗಳೂರು ನಗರವನ್ನು ರಾಜ್ಯ ಹಾಗೂ ರಾಷ್ಟ್ರದಲ್ಲಿ ಮಾದರಿ ನಗರವನ್ನಾಗಿ ಮಾರ್ಪಡಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಕವಿತಾ ಸನಿಲ್, ‘ ₹175 ಕೋಟಿ ಪ್ರೀಮಿಯಂ ಎಫ್‌ಎಆರ್ ಯೋಜನೆಯ ಪೈಕಿ ಪ್ರಸ್ತುತ ₹ 5.14 ಕೋಟಿ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಲಾಗಿದೆ. ಮುಂದಿನ ವಾರ ಮತ್ತೆ ₹ 5 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನಡೆಸಲಾಗುವುದು ಎಂದರು.

ಪಾಲಿಕೆ ಉಪಮೇಯರ್ ರಜನೀಶ್, ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬಿತಾ ಮಿಸ್ಕಿತ್, ನಾಗವೇಣಿ ಪ್ರಮುಖರಾದ ಸ್ಟ್ಯಾನ್ಲಿ ಪಿರೇರಾ, ಡಾ. ಬಿ.ಜಿ.ಸುವರ್ಣ ಉಪಸ್ಥಿತರಿದ್ದರು. ಪಾಲಿಕೆ ಸದಸ್ಯ ರಾಧಾಕಷ್ಣ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.