ADVERTISEMENT

ಸಾರ್ವಜನಿಕ ನಳ್ಳಿ ಸಂಪರ್ಕ ಕಡಿತ!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:35 IST
Last Updated 18 ಫೆಬ್ರುವರಿ 2012, 6:35 IST
ಸಾರ್ವಜನಿಕ ನಳ್ಳಿ ಸಂಪರ್ಕ ಕಡಿತ!
ಸಾರ್ವಜನಿಕ ನಳ್ಳಿ ಸಂಪರ್ಕ ಕಡಿತ!   

ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಬಡಜನರಿಗೆ ಆಧಾರವಾದ ಸಾರ್ವಜನಿಕ ನಳ್ಳಿ ಸಂಪರ್ಕವನ್ನು 15 ದಿನಗಳಿಂದ ಕಡಿತ ಮಾಡಿ ಜನರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಪಾಲಿಕೆ ವಿರೋಧ ಪಕ್ಷದ ಸದಸ್ಯರು ಕಿಡಿಕಾರಿದರು.

ಮೇಯರ್ ಪ್ರವೀಣ್ ಅಂಚನ್ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಕುಡಿಯುವ ನೀರಿನ ವಿಷಯ ಗಂಭೀರ ಚರ್ಚೆಗೆ ಕಾರಣವಾಯಿತು. ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಜಟಾಪಟಿಗೂ ಕಾರಣವಾಯಿತು.

ವಿರೋಧ ಪಕ್ಷದ ನಾಯಕ ಲ್ಯಾನ್ಸ್‌ಲಾಟ್ ಪಿಂಟೋ ವಿಷಯ ಪ್ರಸ್ತಾಪಿಸಿ, ಬಡಜನರು ಬಳಸುವ ಸಾರ್ವಜನಿಕ ನಳ್ಳಿ ಸಂಪರ್ಕಗಳನ್ನು ಒಂದೇ ಸಮನೆ ಕಡಿತಗೊಳಿಸಲಾಗುತ್ತಿದೆ. ಈ ನಳ್ಳಿಗಳನ್ನು ಮುನ್ಸಿಪಾಲಿಟಿ ಇದ್ದಾಗ ಅಳವಡಿಸಲಾಗಿತ್ತು. ಈ ಬಗ್ಗೆ ಮೇಯರ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಸದಸ್ಯ ನವೀನ್ ಡಿಸೋಜ ಮಾತನಾಡಿ, ವಾಣಿಜ್ಯ ಬಳಕೆ ಹಾಗೂ ಹೋಟೆಲ್‌ನವರ ಸಂಪರ್ಕ ಕಿತ್ತು ಹಾಕದೆ ಬಡಜನರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ. ಹೋಟೆಲ್‌ನ ನಳ್ಳಿಗಳ ಮೀಟರ್ ಕೆಲಸ ಮಾಡುವುದೇ ಇಲ್ಲ~ ಎಂದು ದೂರಿದರು.

`ರೂ. 50ರ ದರದಲ್ಲಿ 24 ಸಾವಿರ ಲೀಟರ್‌ವರೆಗೆ ನೀರು ನೀಡಲಾಗುತ್ತಿದೆ. ಶೇ. 7.5 ನಿಧಿಯಲ್ಲಿ ವಾರ್ಷಿಕ ರೂ. 36 ಸಾವಿರಕ್ಕಿಂತ ಕಡಿಮೆ ಆದಾಯ ಇರುವವರಿಗೆ ಉಚಿತ ನೀರು ಪೂರೈಕೆ ಮಾಡಲಾಗುತ್ತಿದೆ. ಬಡಜನರ ಬಳಕೆಗೆ ಎಂದು ಹೇಳಿ ತೋಟಕ್ಕೆ ನೀರು ಪೂರೈಕೆ ಮಾಡುವುದು ಬೆಳಕಿಗೆ ಬಂದಿದೆ. ದುರುಪಯೋಗ ತಡೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ~ ಎಂದು ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಪಾಲಿಕೆ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು.

`ನಿಮ್ಮ ಚುನಾವಣಾ ಭಾಷಣ ನಮಗೆ ಬೇಡ. ಮೇಯರ್ ಉತ್ತರ ಕೊಡಬೇಕು~ ಎಂದು ವಿರೋಧ ಪಕ್ಷದ ಸದಸ್ಯರಾದ ಲ್ಯಾನ್ಸ್ ಲಾಟ್ ಪಿಂಟೋ, ಜಯಂತಿ ಶೆಟ್ಟಿ, ಅಶ್ರಫ್, ಡಿ.ಕೆ.ಅಶೋಕ್ ಕುಮಾರ್ ಒತ್ತಾಯಿಸಿದರು. ಸಭೆಯಲ್ಲಿ ಸ್ವಲ್ಪ ಹೊತ್ತು ಕೋಲಾಹಲ ಉಂಟಾಯಿತು.

`ಜಲಭಾಗ್ಯ ಯೋಜನೆ ಹಾಗೂ ಸಾರ್ವಜನಿಕ ಸಂಪರ್ಕದಡಿ ಎಷ್ಟು ಮಂದಿ ನೀರು ಪಡೆಯುತ್ತಿದ್ದಾರೆ ಎಂಬ ಬಗ್ಗೆ ಸಮೀಕ್ಷೆ ಆಗಬೇಕು. ಶೇ 100 ಮಂದಿಗೂ ಕುಡಿಯುವ ನೀರು ಸಿಗಬೇಕು. ಎಲ್ಲ ಅವ್ಯವಸ್ಥೆ ಸರಿಪಡಿಸಬೇಕು~ ಎಂದು ಮಾಜಿ ಮೇಯರ್ ಶಶಿಧರ ಹೆಗ್ಡೆ ಸಲಹೆ ನೀಡಿದರು.

ಪಾಲಿಕೆ ಆಯುಕ್ತ ಹರೀಶ್ ಕುಮಾರ್ ಪ್ರತಿಕ್ರಿಯಿಸಿ, ನರ್ಮ್ ಯೋಜನೆಯಡಿ 10 ಲಕ್ಷ ಜನಸಂಖ್ಯೆ ಇರುವ ನಗರಗಳಿಗೆ ರೂ 2 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. `ಬಿ~ ಹಂತದ ನಗರಗಳಿಗೆ ಈ ಯೋಜನೆ ವಿಸ್ತರಣೆ ಪ್ರಸ್ತಾವನೆ ಇದೆ. ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವಾಗ ಸೌಕರ್ಯದ ಗುರಿ ನಿಗದಿಪಡಿಸಲಾಗುತ್ತದೆ. ಕುಡಿಯುವ ನೀರಿಗೆ ಎಲ್ಲರಿಗೂ ಮೀಟರ್ ಹಾಕಬೇಕು, ಎಲ್ಲರಿಗೂ ನೀರು ಪೂರೈಕೆ, 24 ಗಂಟೆ ನೀರು ಪೂರೈಕೆ ಮತ್ತಿತರ ಅಂಶಗಳು ಸೇರಿವೆ ಎಂದರು.

`ಸಾರ್ವಜನಿಕ ನಳ್ಳಿಗಳ ಸಂಪರ್ಕ ಕಡಿತದಿಂದ ಕೆಲವು ಕಡೆ ಗೊಂದಲ ಉಂಟಾಗಿರುವುದು ನಿಜ. ಈ ನಿಟ್ಟಿನಲ್ಲಿ ನಿಯಮ ಸ್ವಲ್ಪ ಸರಳೀಕರಣ ಆಗಬೇಕು. ಎಲ್ಲರಿಗೂ ಸಂಪರ್ಕ ಒದಗಿಸದೆ ಸಾರ್ವಜನಿಕ ನಳ್ಳಿಗಳನ್ನು ಏಕಾಏಕಿ ತೆಗೆಯುವುದಿಲ್ಲ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗುವುದು. ಈಗಾಗಲೇ ಟೆಂಡರ್ ಆಗಿದೆ~ ಎಂದು ಮಾಹಿತಿ ನೀಡಿದರು.

ಕುಡಿಯುವ ನೀರಿನ ಸಮಸ್ಯೆ: `ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಎಡಿಬಿ ಯೋಜನೆಯಡಿ ನಿರ್ಮಾಣಗೊಂಡ  ಗಂಧಕಾಡು ಟ್ಯಾಂಕ್‌ನಿಂದ ಕುಡಿಯುವ ನೀರು ಸಮರ್ಪಕ ಪೂರೈಕೆ ಆಗುತ್ತಿಲ್ಲ~ ಎಂದು ವಿರೋಧ ಪಕ್ಷದ ಸದಸ್ಯ ಹರಿನಾಥ್ ದೂರಿದರು.

ತಮ್ಮ ವಾರ್ಡ್‌ಗಳಲ್ಲೂ ಕಳೆದ ಕೆಲವು ದಿನಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ಎಂದು ಸದಸ್ಯರಾದ ನಾಗೇಂದ್ರ ಕುಮಾರ್, ವಿಜಯ ಕುಮಾರ್ ಶೆಟ್ಟಿ, ಜಯಂತಿ ಶೆಟ್ಟಿ ದೂರಿದರು.

ರೂ 140 ಕೋಟಿ ವೆಚ್ಚದಲ್ಲಿ ಎಡಿಬಿ ಅನುದಾನದಲ್ಲಿ ಕುಡ್ಸೆಂಪ್ ವತಿಯಿಂದ ಆದ ಸಮಗ್ರ ನೀರಿನ ಯೋಜನೆಯನ್ನು ಕುಡ್ಸೆಂಪ್ ಪಾಲಿಕೆಗೆ ಹಸ್ತಾಂತರಿಸಿದೆ. ಇಲ್ಲಿ ಕಳಪೆ ಕೆಲಸ ಆಗಿದೆ. ಕುಡ್ಸೆಂಪ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಜೇಮ್ಸ ಡಿಸೋಜ ಆಗ್ರಹಿಸಿದರು.

ಮೇಯರ್ ಪ್ರವೀಣ್ ಪ್ರತಿಕ್ರಿಯಿಸಿ, ಎಡಿಬಿ ಯೋಜನೆಯಡಿ ಆದ ಸಮಸ್ಯೆಗಳ ಬಗ್ಗೆ ಒಂದು ವಾರದಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಕುಡ್ಸೆಂಪ್ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಆಯುಕ್ತ ಹರೀಶ್ ಕುಮಾರ್ ಮಾತನಾಡಿ, ಪಾಲಿಕೆಯಲ್ಲಿ ನೀರಿನ ಸಮಸ್ಯೆ ಇಲ್ಲ. ಪೂರೈಕೆ ಪ್ರಯೋಗದಿಂದ ಕೆಲವು ಕಡೆ ಸಮಸ್ಯೆ ಆಗಿದೆ. ಮೇಯರ್ ಛೇಂಬರ್‌ನಲ್ಲಿ ಒಂದು  ವಾರದಲ್ಲಿ ಈ ಸಂಬಂಧ ಸದಸ್ಯರ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು. ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಉಪ ಮೇಯರ್ ಗೀತಾ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.