ADVERTISEMENT

ಸಿಪಿಎಂ ಪ್ರತಿಭಟನೆ 27ರಂದು

ಮಡೆಸ್ನಾನ, ಪಂಕ್ತಿಭೇದಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:48 IST
Last Updated 15 ಡಿಸೆಂಬರ್ 2012, 9:48 IST

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನ ಪದ್ಧತಿ ಹಾಗೂ ಉಡುಪಿ ಶ್ರೀಕೃಷ್ಣ ದೇಗುಲದಲ್ಲಿ ಆಚರಣೆಯಲ್ಲಿರುವ ಪಂಕ್ತಿ ಭೇದವನ್ನು ವಿರೋಧಿಸಿ ಇದೇ 27ರಂದು ಉಡುಪಿಯಲ್ಲಿ ಪ್ರತಿಭಟನೆ ಹಾಗೂ ಬಹಿರಂಗ ಸಭೆ ನಡೆಸಲಾಗುವುದು ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ. ಮಾಧವ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 21, 22ರಂದು ಕುಕ್ಕೆ ಸುಬ್ರಹ್ಮಣ್ಯದಿಂದ ಮಂಗಳೂರುವರೆಗೆ ವಾಹನ ಜಾಥಾ, 24, 25 ಹಾಗೂ 26ರಂದು ಮಂಗಳೂರಿನಿಂದ ಉಡುಪಿವರೆಗೆ ಕಾಲ್ನಡಿಗೆ ಜಾಥಾ, 24ರಂದು ಬೈಂದೂರಿನಿಂದ ಕುಂದಾಪುರಕ್ಕೆ ಬೈಕ್ ಜಾಥಾ ಹಾಗೂ 25, 26ರಂದು ಕುಂದಾಪುರದಿಂದ ಉಡುಪಿಗೆ ನಡಿಗೆ ಜಾಥಾ ನಡೆಯಲಿದೆ ಎಂದು ತಿಳಿಸಿದರು.

21ರಂದು ಬೆಳಿಗ್ಗೆ 11 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಡುವ ವಾಹನ ಜಾಥಾವನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ  ಜಿ.ವಿ.ಶ್ರೀರಾಮ ರೆಡ್ಡಿ ಉದ್ಘಾಟಿಸುವರು. ಮಂಗಳೂರಿನಿಂದ 24ರಂದು ಹೊರಡುವ ಕಾಲ್ನಡಿಗೆ ಜಾಥಾವನ್ನು ಸಿಪಿಎಂ ಕೇಂದ್ರ ಕಾರ್ಯದರ್ಶಿ ಮಂಡಳಿ ಸದಸ್ಯ ಶ್ರೀನಿವಾಸ ರಾವ್ ಉದ್ಘಾಟಿಸುವರು. 27ರಂದು ಉಡುಪಿಯಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಬಿ.ವಿ. ರಾಘವುಲು ಪ್ರಧಾನ ಭಾಷಣ ಮಾಡುವರು ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.