ADVERTISEMENT

ಸುರತ್ಕಲ್ ಹೊಸಬೆಟ್ಟು: ನಗರದಲ್ಲೊಂದು ಹಳ್ಳಿ ಬದುಕು

ಕುಡಿಯಲು ನೀರಿಲ್ಲ, ಬಯಲು ಶೌಚಾಲಯ ತಪ್ಪಿಲ್ಲ, ರಸ್ತೆಯಂತೂ ಇಲ್ಲವೇ ಇಲ್ಲ

ನರೇಶ್ ಸಸಿಹಿತ್ಲು
Published 1 ಆಗಸ್ಟ್ 2013, 13:09 IST
Last Updated 1 ಆಗಸ್ಟ್ 2013, 13:09 IST

ಸುರತ್ಕಲ್: ದಿನಕ್ಕೊಮ್ಮೆ ಬರುವ ನಳ್ಳಿ ನೀರನ್ನು ಕಾದುಕುಳಿತು, ಕಡಲ ತೀರದ ಬಯಲು ಶೌಚಾಲಯಕ್ಕೆ ಹೊಂದಿಕೊಂಡು, ಹತ್ತಾರು ಮನೆಯ ಸುತ್ತಿ ಬಳಸಿ ಬರುವ ರಸ್ತೆಯನ್ನೇ ನಂಬಿಕೊಂಡು, ಮಳೆ ನೀರು ನಿಂತು ಗಬ್ಬೆದ್ದು ಹೋಗಿರುವ ಚರಂಡಿಯ ಬಳಿಯೇ ಡೆಂಗೆ, ಮಲೇರಿಯ ಭೀತಿಯನ್ನು ಎದುರಿಸುತ್ತಾ ಬದುಕುತ್ತಿರುವ ಹೊಸಬೆಟ್ಟು ನಿವಾಸಿಗಳ ಅಸಹನೀಯ ಬದುಕು ಬೆಳಕಿಗೆ ಬಂದಿದೆ.

ಹೊನ್ನಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಎರಡು ಕಿ.ಮೀ ದೂರದಲ್ಲಿರುವ ಈ ಪ್ರದೇಶ ನಗರ ವ್ಯಾಪ್ತಿಯಲ್ಲೇ ಇದ್ದರೂ ಹಳ್ಳಿಯ ಜನರಿಗಿಂತಲೂ ದುಃಸ್ಥರವಾದ ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲಿನ ಮಹಿಳೆಯರು ಇಂದಿಗೂ ಸಮುದ್ರ ತೀರದ ಬಯಲು ಶೌಚಾಲಯವನ್ನೇ ನಂಬಿಕೊಂಡಿದ್ದಾರೆ!. `ನೀರು, ಶೌಚಾಲಯ, ರಸ್ತೆ ಹೀಗೆ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲದೇ ಇದ್ದರೂ ಯಾವುದೇ ಜನ ಪ್ರತಿನಿಧಿಗಳೂ ನಮ್ಮತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ' ಎನ್ನುವುದು ಸ್ಥಳೀಯರ ಆರೋಪ.

ಮೂರು ವರ್ಷದ ಮುಂಚಿನವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಸಮಸ್ಯೆ ಕಾಡಿದ್ದೇ ಖಾಸಗಿ ಸಂಸ್ಥೆಯವರು ಇಲ್ಲಿ ಜಾಗ ಖರೀದಿಸಿದಾಗ. ರಾಷ್ಟ್ರೀಯ ಹೆದ್ದಾರಿಯಿಂದ ಆರಂಭಿಸಿ ಹೊಸಬೆಟ್ಟು ವರೆಗಿನ ಇಪ್ಪತ್ತಕ್ಕೂ ಅಧಿಕ ಎಕರೆ ಸ್ಥಳವನ್ನು ಖರೀದಿಸಿದ ಖಾಸಗಿ ಸಂಸ್ಥೆ ಆ ಸ್ಥಳವನ್ನು ಮಣ್ಣು ಹಾಕಿ ತುಂಬಿಸಿದಾಗ ನಿಜವಾದ ಸಮಸ್ಯೆ ಆರಂಭವಾಯಿತು. ಅಲ್ಲಿಯವರೆಗೆ ಮರಳು ಇದ್ದ ಕಾರಣ ಮಳೆ ನೀರು, ಶೌಚಾಲಯದ ನೀರು ಎಲ್ಲವೂ ಇಂಗಿ ಹೋಗುತ್ತಿದ್ದವು, ಬಾವಿಯಲ್ಲೂ ಶುದ್ದ ನೀರು ಲಭ್ಯವಾಗಿ ಕುಡಿಯುವ ನೀರಿಗೂ ತತ್ವಾರ ಇಲ್ಲವಾಗಿತ್ತು. ಚರಂಡಿಯೂ ಸಮರ್ಪಕವಾಗಿದ್ದ ಕಾರಣ ಚರಂಡಿ ನೀರು ಹರಿದು ಹೋಗಿ ಕಡಲು ಸೇರುತ್ತಿತ್ತು. ಜನ ತಮ್ಮ ಓಡಾಟಕ್ಕೆ ಗದ್ದೆ ಬದಿಯ ಕಾಲುದಾರಿಯನ್ನೂ ನಂಬಿಕೊಂಡಿದ್ದರು. ಇದೀಗ ರಸ್ತೆ ಸಂಪರ್ಕ ಕಡಿದು ಆರೋಗ್ಯ ಕೈಕೊಟ್ಟರೂ ರೋಗಿಗಳನ್ನು ಹೊತ್ತುಕೊಂಡೇ ರಸ್ತೆಯವರೆಗೆ ಬರ ಬೇಕಾಗಿದೆ.

ಇಲ್ಲಿನ ಮನೆಗಳ ಶೌಚಾಲಯದ ಗುಂಡಿಯಲ್ಲಿ ಶೌಚ ಇಂಗುತ್ತಲೇ ಇಲ್ಲ. ಪರಿಣಾಮ ಶೌಚಾಲಯ ಕಟ್ಟಿಕೊಂಡು ದುರ್ನಾತ ಬೀರುತ್ತಿದೆ. ಹೀಗಾಗಿ ಹೆಂಗಸರೂ ಸೂರ್ಯ ಮೂಡುವ ಮುನ್ನವೇ ಎದ್ದು ಸಮುದ್ರ ತೀರದ ಬಯಲು ಶೌಚಾಲಯವನ್ನೇ ಆಶ್ರಯಿಸುತ್ತಿದ್ದಾರೆ. ಯುವತಿಯರಂತೂ ಹತ್ತು ನಿಮಿಷ ನಡೆದು ದೂರದಲ್ಲಿರುವ ಒಂದು ಮನೆಯ ಶೌಚಾಲಯವನ್ನೇ ನಂಬಿಕೊಂಡಿದ್ದಾರೆ. ಖಾಸಗಿ ಸಂಸ್ಥೆ ಅಲ್ಲಲ್ಲಿ ಹೊಂಡ ತೆಗೆದಿದ್ದು, ಇನ್ನು ಕೆಲವು ಕಡೆ ಮಣ್ಣು ಹಾಕದೇ ಉಳಿಸಿದ್ದು ಅಲ್ಲೆಲ್ಲಾ ಚರಂಡಿ ನೀರು ಶೇಖರಣೆಗೊಂಡು ದುರ್ನಾತ ಬೀರುತ್ತಿದೆ. ಇದು ಮಲೇರಿಯ, ಡೆಂಗೆ ಹರಡಲೂ ಕಾರಣವಾಗಿದೆ.

ಈ ಬಗ್ಗೆ ಈಗಾಗಲೇ ಸ್ಥಳೀಯರು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರು ನೀಡಿದ್ದಾರೆ. ಮಲೇರಿಯ ನಿಯಂತ್ರಣಕ್ಕೆ ಪಾಲಿಕೆ ಹತ್ತಾರು ಮಾರ್ಗ ಅನುಸರಿಸಿದರೂ ಈ ಪ್ರದೇಶಕ್ಕೆ ಕನಿಷ್ಠ ಔಷಧ ಸಿಂಪಡಿಸುವ ಪ್ರಯತ್ನವೂ ಆಗಿಲ್ಲ ಎನ್ನುವ ಸ್ಥಳೀಯರು ಜಿಲ್ಲಾಡಳಿತವೇ ನಮ್ಮತ್ತ ಗಮನಹರಿಸಬಹುದೇ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.