ADVERTISEMENT

ಸುಳ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 9:31 IST
Last Updated 21 ಸೆಪ್ಟೆಂಬರ್ 2013, 9:31 IST

ಸುಳ್ಯ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವೈದ್ಯ ಡಾ.ರಘು ಅವರಿಗೆ ನಿಗಮ-ಮಂಡಳಿ ಅಧ್ಯಕ್ಷತೆ ನೀಡಲು ಪಕ್ಷದ ಒಂದು ಗುಂಪಿನ ನಾಯಕರು ರಾಜ್ಯ ನಾಯಕರ ಮೇಲೆ ಒತ್ತಡ ಹಾಕಿಲ್ಲ ಎಂದು ಪಕ್ಷದ ಪರಿಶಿಷ್ಟ ಜಾತಿ ಘಟಕ ಆರೋಪಿಸಿದೆ.

ಡಾ.ರಘು ಅವರಿಗೆ ನಿಗಮ ಮಂಡಳಿ ಅಧ್ಯಕ್ಷತೆ ನೀಡಬಾರದೆಂದು ಪ್ರಯತ್ನಗಳು ನಡೆದಿವೆ. ನಿಗಮ ಮಂಡಳಿಗೆ ನೇಮಕ ಮಾಡಲು ತಾಲ್ಲೂಕಿನಿಂದ 12 ಜನರ ಪಟ್ಟಿಯನ್ನು ಕೋರ್ ಕಮಿಟಿ ಸಿದ್ಧ ಪಡಿಸಿದ್ದು, ಅದರಲ್ಲಿ ಡಾ.ರಘು ಹೆಸರು ಇರಲಿಲ್ಲ. ಈ ಕುರಿತು ಪ್ರಶ್ನಿಸಿದಾಗ ಪಟ್ಟಿ ಕಳುಹಿಸಿ ಆಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಪಕ್ಷದ ನಾಯಕರು ಪರಿಶಿಷ್ಟ ಜಾತಿಯ ಘಟಕವನ್ನು ಕೇವಲ ಚುನಾವಣೆಯ ಉದ್ದೇಶಕ್ಕೆ ಮಾತ್ರ ಬಳಸುತ್ತಿದ್ದಾರೆ. ಘಟಕದ ಅಧ್ಯಕ್ಷ ಪದಾಧಿಕಾರಿಗಳಿಗೆ ಆರ್ಥಿಕ ಶಕ್ತಿ ನೀಡದೆ ದುಡಿಸಿಕೊಂಡಿ­ದ್ದಾರೆ ಎಂದು ಸಮಿತಿ ಅಧ್ಯಕ್ಷ ಅಚ್ಚುತ ಮಲ್ಕಜೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿ­ದರು.

ಈ ವಿಚಾರಗಳನ್ನು ಪಕ್ಷದ ಕಾರ್ಯ­ಕರ್ತರ ಸಭೆಯಲ್ಲಿ ಹೇಳಿಕೊಳ್ಳಲು ತೀರ್ಮಾನಿಸಿದ್ದೆವು. ಆದರೆ ಬ್ಲಾಕ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಕಾರ್ಯಕರ್ತರ ಸಭೆಯನ್ನು ಒಮ್ಮೆ ಮಾತ್ರ ಕಾಟಾಚಾರಕ್ಕೆ ಕರೆದು ಕೈ ತೊಳೆದುಕೊಂಡಿದ್ದಾರೆ. ವಿಧಾನಸಭಾ ಚುನಾವಣೆ ಬಳಿಕ ನಮ್ಮ ಘಟಕದ ವತಿಯಿಂದ ನಾವು ಪ್ರತಿ ತಿಂಗಳು ಸಭೆ ನಡೆಸುತ್ತಿದ್ದೇವೆ.

ಈ ಸಭೆಗೆ ಬ್ಲಾಕ್ ನಾಯಕರನ್ನು ಕರೆದರೂ ಬರುತ್ತಿಲ್ಲ. ನಿಗಮ ಮಂಡಳಿ ಆಯ್ಕೆ ಪಟ್ಟಿಯಲ್ಲಿ ಡಾ.ರಘುರವರಿಗೆ ಗೌರವದ ನಿಗಮದ ಅಧ್ಯಕ್ಷತೆ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪರಿ­ಶಿಷ್ಟ ಜಾತಿ ಘಟಕ ಸುಳ್ಯ ಮತ್ತು ಪುತ್ತೂರಿನಲ್ಲಿ ಲೋಕಸಭಾ ಅಭ್ಯರ್ಥಿ ಪರ ನಾವು ಕೆಲಸ ಮಾಡುವುದಿಲ್ಲ. ಡಾ.ರಘುರವರಿಗೆ ಅನ್ಯಾಯವಾದರೆ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿ­ಗಳು ತಮ್ಮ ಹುದ್ದೆಗೆ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಅವರ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಹೇಳಿದರು.

ಕಾರ್ಯದರ್ಶಿ ನಾರಾಯಣ ಜಟ್ಟಿಪಳ್ಳ, ತಾ.ಪಂ.ಸದಸ್ಯ ದೇವಪ್ಪ ಹೈದಂಗೂರು, ಜಯಂತಿ ತೊಡಿಕಾನ, ಲಕ್ಷ್ಮೀ ಸುಬ್ರಹ್ಮಣ್ಯ, ಭಾರತಿ ಕಟ್ಟ, ದಯಾನಂದ, ಮಾಧವ ಐವರ್ನಾಡು, ವೆಂಕಟ್ರಮಣ ಕುಂಟಿಕಾನ, ಕೇಪು ತೊಡಿಕಾನ, ಸುಂದರ, ಮೋಹನ್ ಕುಂಟಿಕಾನ, ನಿತ್ಯಾನಂದ, ಅನಸೂಯ, ನಾರಾಯಣ, ಅಮಿತಾ, ಎ.ಕೆ.­ಪೊನ್ನಮ್ಮ, ಕಿಶನ್, ಪದ್ಮನಾಭ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT