ADVERTISEMENT

ಸೇತುವೆಯಲ್ಲಿ ಸಿಕ್ಕಿಬಿದ್ದು ವಿಮಾನ ತಪ್ಪಿಸಿಕೊಂಡ!

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 9:40 IST
Last Updated 11 ಜೂನ್ 2011, 9:40 IST

ಮಂಗಳೂರು: ಇಲ್ಲಿಗೆ ಸಮೀಪದ ನೇತ್ರಾವತಿ ಸೇತುವೆಯಲ್ಲಿ ಶುಕ್ರವಾರ ವಾಹನ ದಟ್ಟಣೆಯಿಂದ ದೀರ್ಘ ಕಾಲ ಸಂಚಾರವೇ ಸ್ಥಗಿತಗೊಂಡಿತ್ತು. ಪರಿಣಾಮ ಉಳ್ಳಾಲ ಕೊಲ್ಯದ ಯುವಕನೊಬ್ಬನಿಗೆ ವಿಮಾನ ತಪ್ಪಿಹೋಯಿತು.
ಕೊಲ್ಯದ ದಯಾನಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 11.30ಕ್ಕೆ ಕುವೇತ್‌ಗೆ ತೆರಳಬೇಕಿತ್ತು.

ಅವರು ಬೆಳಿಗ್ಗೆ 8.30ಕ್ಕೇ ಮನೆಯಿಂದ ಹೊರಟಿದ್ದರು. ನೇತ್ರಾವತಿ ಸೇತುವೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡ ಕಾರಣ ವಿಮಾನ ನಿಲ್ದಾಣವನ್ನು ಸಕಾಲದಲ್ಲಿ ತಲುಪಲಾಗದೇ ವಿಮಾನ ತಪ್ಪಿಸಿಕೊಂಡರು.

ಕಡೆಗೂ ಎಲ್ಲ ಅಡೆತಡೆ ದಾಟಿ ಗೆಳೆಯನ ಬೈಕ್‌ನಲ್ಲಿ ಪಂಪ್‌ವೆಲ್‌ಗೆ ಬಂದರು. ಅಲ್ಲಿಂದ ಟ್ಯಾಕ್ಸಿಯಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಅಷ್ಟರಲ್ಲಾಗಲೇ ಜೆಟ್ ಏರ್‌ವೇಸ್ ವಿಮಾನ ಹೊರಡಲು ಸಜ್ಜಾಗಿತ್ತು. ಆದರೆ, ಲಗೇಜ್ ಪರಿಶೀಲನೆ-ತಪಾಸಣೆ ಕಾರ್ಯ ಆಗಿಲ್ಲದೇ ಇರುವುದರಿಂದ ವಿಮಾನ ಪ್ರವೇಶ ಸಾಧ್ಯವಿಲ್ಲ ಎಂದು ಸಿಬ್ಬಂದಿ ತಡೆದರು. ಮತ್ತೊಂದು ವಿಮಾನದಲ್ಲಿ ಲಗೇಜ್ ಕಳುಹಿಸಿ ಎಂದು ದಯಾನಂದ ವಿನಂತಿಸಿಕೊಂಡರೂ ಸಿಬ್ಬಂದಿಯಿಂದ ಸ್ಪಷ್ಟ ಉತ್ತರ ಸಿಗಲಿಲ್ಲ. ಹೀಗಾಗಿ ಅವರು ಕುವೇತ್ ಪ್ರಯಾಣ ತಪ್ಪಿಸಿಕೊಳ್ಳವಂತಾಯಿತು.

`ವಿಮಾನ ತಪ್ಪಿದ್ದರಿಂದ ತಮಗೆ ರೂ. 10 ಸಾವಿರ ನಷ್ಟವಾಗಿದೆ. ಸಂಸದ ನಳಿನ್ ಕುಮಾರ್ ಅವರಿಗೆ ದೂರು ಸಲ್ಲಿಸುವೆ~ ಎಂದು `ಪ್ರಜಾವಾಣಿ~ ಬಳಿ ಅಲವತ್ತುಕೊಂಡ ದಯಾನಂದ್, ಶನಿವಾರ ವಿಮಾನದಲ್ಲಿ ತೆರಳುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.