ADVERTISEMENT

ಹಳೆಯಂಗಡಿ ಗ್ರಾಮಸಭೆ ಸುಳ್ಳು ದೂರಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 9:45 IST
Last Updated 15 ಫೆಬ್ರುವರಿ 2012, 9:45 IST

ಹಳೆಯಂಗಡಿ (ಮೂಲ್ಕಿ): ಕುಡಿಯುವ ನೀರಿನ ಸಾಮಾನ್ಯ ಸಭೆಯಲ್ಲಿ ಸಮಿತಿಯ ಅಧ್ಯಕ್ಷರ ವಿರುದ್ಧ ಮಹಿಳಾ ಸದಸ್ಯೆ ರಾಜಕೀಯ ಪ್ರೇರಿತ ಜಾತಿ ನಿಂದನೆಯ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಹಳೆಯಂಗಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಕ್ಷೇಪಿಸಿದ ಘಟನೆ ನಡೆಯಿತು.

ಹಳೆಯಂಗಡಿಯ ಜಾರಂದಾಯ ದೈವಸ್ಥಾನದಲ್ಲಿ ಮಂಗಳವಾರ ಪಂಚಾಯಿತಿ ಅಧ್ಯಕ್ಷ ಮಹಾಬಲ ಸಾಲ್ಯಾನ್‌ರವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆದಾಗ ಈ ಆಕ್ಷೇಪ ಕೇಳಿಬಂತು. ಸಮಿತಿ ಅಧ್ಯಕ್ಷರ ವಿರುದ್ಧ ಯಾವುದೇ ಸಾಕ್ಷಿ ಇಲ್ಲದೇ ದೂರು ದಾಖಲಿಸಿದ್ದರಿಂದ ಅದನ್ನು ಹಿಂದೆ ಪಡೆಯಬೇಕು ಹಾಗೂ ಸಭೆಯಲ್ಲಿ ಹಾಜರಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕನಾಥ್ ಸ್ಪಷ್ಟನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಅಂತಹ ಯಾವುದೇ ಜಾತಿ ನಿಂದನೆ ನಡೆದಿಲ್ಲ. ಆದರೆ ಪರಸ್ಪರ ಮಾತಿನ ಚಕಮಕಿ ನಡೆದಿದೆ ಎಂದು ಅಧಿಕಾರಿ ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಇನ್ಸ್‌ಪೆಕ್ಟರ್ ಬಶೀರ್ ಅಹ್ಮದ್ ಅವರಲ್ಲಿ ಗ್ರಾಮಸ್ಥರು ಸಾಕ್ಷಿ ಇಲ್ಲದೆ ಎಫ್‌ಐಆರ್ ದಾಖಲಿಸಿದ್ದು ಸರಿಯೇ ಎಂದು ಪ್ರಶ್ನಿಸಿದಾಗ ಜಿಲ್ಲಾಧಿಕಾರಿಗೆ ದೂರು ನೀಡಿದ್ದರಿಂದ ಅವರ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ. ದೂರು ಸುಳ್ಳು ಎಂಬುದನ್ನು ನ್ಯಾಯಾಲಯ ತೀರ್ಮಾನಿಸಬೇಕು ಎಂದು ಹೇಳಿ ವಿವಾದಕ್ಕೆ ತೆರೆ ಎಳೆದರು.

ಸಭೆ ಆರಂಭದಲ್ಲಿ 23 ಇಲಾಖೆಯ ಅಧಿಕಾರಿಗಳು ಗೈರು ಹಾಜರಿ ಹಿನ್ನೆಲೆಯಲ್ಲಿ ಅಧ್ಯಕ್ಷರೇ ಗ್ರಾಮ ಸಭೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಾಗ, ಅಧಿಕಾರಿಗಳು ಒಬ್ಬೊಬ್ಬರಾಗಿ ಸಭೆಗೆ ಬರತೊಡಗಿದರು. ಆದರೆ ಪಂಚಾಯಿತಿಯ 20 ಸದಸ್ಯರಲ್ಲಿ ಭಾಗವಹಿಸಿದ್ದು 7 ಮಂದಿ ಮಾತ್ರ.

ಮೂಲ್ಕಿಯ ಅಡುಗೆ ಅನಿಲ ಸರಬರಾಜು ವಿತರಣಾ ಕೇಂದ್ರದಿಂದ ಹೆಚ್ಚುವರಿ ಶುಲ್ಕವನ್ನು ಪಡೆಯುವ ಬಗ್ಗೆ ಗ್ರಾಮಸ್ಥರೊಬ್ಬರು ದೂರಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿ ವಾಸು ಶೆಟ್ಟಿ ಭರವಸೆ ನೀಡಿದರು. ನೋಡೆಲ್ ಅಧಿಕಾರಿ ಷಣ್ಮುಗಂ, ಉಪಾಧ್ಯಕ್ಷೆ ಮಮತಾ ಮೆಂಡನ್, ಗ್ರಾಮಸ್ಥರಾದ ಸತೀಶ್ ಭಟ್, ವಿನೋದ್ ಬೋಳ್ಳುರು, ರಾಮಚಂದ್ರ ಶೆಣೈ, ಮನೋಜ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.