ಮೂಡುಬಿದಿರೆ: `ಹವಿಗನ್ನಡವು ಕೇವಲ ಹವ್ಯಕರಿಗೆ ಸೀಮಿತವಾದ ಭಾಷೆಯಾಗಿರದೇ ಕನ್ನಡದ ಒಂದು ಉಪಭಾಷೆಯಾಗಿದೆ. ಕನ್ನಡಕ್ಕೆ ತೀರಾ ಹತ್ತಿರದ ಸಂಬಂಧ ಹೊಂದಿದೆ~ ಎಂದು ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಹೇಳಿದರು.
ಕಾಂತಾವರದಲ್ಲಿ ಭಾನುವಾರ ಕನ್ನಡ ಸಂಘದ `ತಿಂಗಳ ನುಡಿನಮನ~ ಕಾರ್ಯಕ್ರಮದಲ್ಲಿ ಅವರು `ಹವಿಗನ್ನಡ ನುಡಿಸಂಸ್ಕೃತಿ ವಿಷಯದ ಕುರಿತು ಉಪನ್ಯಾಸ ನೀಡಿದರು.
ಶಿಷ್ಟ ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲದ ಹಳೆಗನ್ನಡದ ಅನೇಕ ಶಬ್ದ ಸಂಪತ್ತು ಇಂದಿಗೂ ಹವಿಗನ್ನಡದಲ್ಲಿ ಉಳಿಕೊಂಡಿದೆ ಎಂದು ಅವರು ಹೇಳಿದರು.
ಭಾಷೆಯ ಜತೆಗೆ ಸಂಸ್ಕೃತಿಯ ಆವರಣವೂ ಇರುವುದರಿಂದ ಭಾಷೆ ಬೆಳೆದಂತೆ ಸಂಸ್ಕೃತಿಯೂ ಬೆಳೆಯುತ್ತದೆ. ಇದಕ್ಕಾಗಿ ಸಾಹಿತ್ಯ ರಚನೆಯೂ ಅನಿವಾರ್ಯ. ಈ ನೆಲಯಲ್ಲೆ ಮಹಾಕಾವ್ಯದ ಸಹಿತ ಸಾಹಿತ್ಯದ ಎಲ್ಲಾ ಪ್ರಕಾರಗಳ ರಚನೆಗಳೂ ಹವಿಗನ್ನಡದಲ್ಲಿ ಪ್ರಕಟಣೆಗೊಂಡಿವೆ ಎಂದರು.
ಕನ್ನಡದ ವಿಭಿನ್ನ ಉಪಭಾಷೆ ಸಂಸ್ಕೃತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಯಬೇಕಾಗಿದ್ದು ಇವೆಲ್ಲವೂ ಉಗ್ಗೂಡಿದಾಗ ಕನ್ನಡ ಭಾಷೆ, ಸಂಸ್ಕೃತಿ ಶ್ರಿಮಂತಗೊಳ್ಳುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ನಿರಂತರ ಪ್ರಾಯೋಜಕ ಸಿ.ಕೆ. ಪಡಿವಾಳ್ ಉಪಸ್ಥಿತಿಯಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ವಿಠಲ ಬೇಲಾಡಿ, ರಾಮಚಂದ್ರ ಆಚಾರ್ಯ, ಮಂಜುನಾಥ್ ಶೆಟ್ಟಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.