ಮಂಗಳೂರು: ಬಿಜೆಪಿಯನ್ನು ಸೋಲಿಸಿ ಪಾಲಿಕೆಯನ್ನು ಮತ್ತೆ ತೆಕ್ಕೆದ ಪಡೆದ ಕಾಂಗ್ರೆಸ್‌ಗೆ ಭರ್ತಿ ಒಂದು ‘ತಾಳ್ಮೆ’ಪರೀಕ್ಷೆಯ ಬಳಿಕವೂ ಮತ್ತೊಂದು ಸತ್ವ ಪರೀಕ್ಷೆ ಎದುರಾಗಿದೆ. ಮಂಗಳೂರಿನ ‘ಪ್ರಥಮ ಪ್ರಜೆ’ ಯಾರಾಗಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ಪಕ್ಷದ ಜಿಲ್ಲಾ ವರಿಷ್ಠರಿಗೆ ಬುಧವಾರ ರಾತ್ರಿಯವರೆಗೂ ಸಾಧ್ಯವಾಗಿಲ್ಲ.
ಗುರುವಾರ ಬೆಳಿಗ್ಗೆ 11 ಗಂಟೆಗೆ ಪಾಲಿಕೆಯ ಮೇಯರ್ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬೆಳಿಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ, ಸದಸ್ಯರಿಗೆ ವಿಪ್ ಜಾರಿಮಾಡಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ.
ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮಾ.11ಕ್ಕೆ ಭರ್ತಿ ಒಂದು ವರ್ಷ ತುಂಬಿದೆ. ಈ ಬಾರಿ ಘಟಾನುಘಟಿ ಅಭ್ಯರ್ಥಿಗಳೇ ಗೆದ್ದು ಬಂದಿದ್ದರಿಂದ ಮೇಯರ್ ಆಯ್ಕೆ ಕಗ್ಗಂಟಿನ ವಿಷಯವಾಗಿತ್ತು. ಮೇಯರ್ ಮತ್ತು ಉಪಮೇಯರ್ ಮೀಸಲಾತಿಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯ ಅಜೀಜ್ ಕುದ್ರೋಳಿ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಮೇಯರ್ ಆಯ್ಕೆಯ ಸತ್ವ ಪರೀಕ್ಷೆ ಒಂದು ವರ್ಷ ಕಾಲ ಮುಂದಕ್ಕೆ ಹೋಗಿತ್ತು. ಕೊನೆಗೂ ಹೈಕೋರ್ಟ್ ಆದೇಶದಂತೆ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಟ್ಟ ನಂತರ ‘ಘಟಾನುಘಟಿ’ ಸದಸ್ಯರ ನಡುವೆ ಮೇಯರ್ ಕುರ್ಚಿಗಾಗಿ ಭಾರಿ ಪೈಪೋಟಿ ನಡೆದಿತ್ತು. ಒಟ್ಟು ಆರು ಬಾರಿ ಗೆದ್ದ ಲ್ಯಾನ್ಸ್ ಲಾಟ್ ಪಿಂಟೊ, ಐದು ಬಾರಿ ಗೆದ್ದ ಹರಿನಾಥ್, ಮೂರು ಬಾರಿ ಗೆದ್ದ ನವೀನ್ ಡಿಸೋಜ ಹಾಗೂ ಮಹಾಬಲ ಮಾರ್ಲ ಅವರು ಈ ಸ್ಪರ್ಧೆಯಲ್ಲಿದ್ದರು. ಈಗ ಅಂತಿಮವಾಗಿ ಪಚ್ಚನಾಡಿ ವಾರ್ಡಿನ ಹರಿನಾಥ್ ಹಾಗೂ ಕದ್ರಿ ಪದವು ವಾರ್ಡಿನ ಮಹಾಬಲ ಮಾರ್ಲ ಅವರ ನಡುವೆ ಮೇಯರ್ ಗಾದಿಗಾಗಿ ಹಣಾಹಣಿ ನಡೆದಿದೆ.
‘ಈ ಚುನಾವಣೆ ನನಗೆ ಕೊನೆಯದು. ಪಚ್ಚನಾಡಿ ಗ್ರಾಮ ಪಂಚಾಯಿತಿ ಆಗಿದ್ದಾಗ ಸದಸ್ಯನಾಗಿದ್ದವ ನಾನು. ಆ ಬಳಿಕ 1984ರಲ್ಲಿ ಪಚ್ಚನಾಡಿ ಪಾಲಿಕೆಯ ವ್ಯಾಪ್ತಿಗೆ ಸೇರಿದಾಗಿನಿಂದ ಐದು ಬಾರಿ ಗೆದ್ದು ಬಂದಿದ್ದೇನೆ. ನನಗಿದು ಕೊನೆಯ ಚುನಾವಣೆ. ಹಾಗಾಗಿ ಮೇಯರ್ ಸ್ಥಾನ ನನಗೇ ಕೊಡಬೇಕು’ ಎಂಬುದು ಹರಿನಾಥ್ ಅವರ ವಾದ.
1994ರಲ್ಲಿ ಒಮ್ಮೆ ಉಪಮೇಯರ್ ಆಗಿದ್ದ ಹರಿನಾಥ್ ಅವರು 2002ರಲ್ಲೂ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ರಮೇಶ್ ಕೋಟ್ಯಾನ್ ಅವರು ಎರಡನೇ ಬಾರಿ ಮೇಯರ್ ಆಗುವುದಕ್ಕೆ ಅವಕಾಶ ಕಲ್ಪಿಸಿದ ಕಾಂಗ್ರೆಸ್ ಹರಿನಾಥ್ ಬೇಡಿಕೆಗೆ ಸೊಪ್ಪು ಹಾಕಿರಲಿಲ್ಲ.
ಮಹಾಬಲ ಮಾರ್ಲ ಅವರು ಪಕ್ಷದಲ್ಲೂ ಪ್ರಭಾವಿ ಸದಸ್ಯ. ಅನುಭವಿ ಹರಿನಾಥ್– ಪ್ರಭಾವಿ ಮಾರ್ಲ ನಡುವೆ ಯಾರಿಗೆ ಮೇಯರ್ ಗಾದಿ ಒಲಿಯುತ್ತದೋ ಕಾದುನೋಡಬೇಕಿದೆ.
ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು. ಈ ಸ್ಥಾನಕ್ಕಾಗಿ ಕ್ರೈಸ್ತ ಮಹಿಳೆ ಜೆಸಿಂತಾ ವಿಜಯ ಆಲ್ಫ್ರೆಡ್, ಮೊಗವೀರ ಸದಸ್ಯರಾದ ಹೊಯ್ಗೆಬಜಾರ್ ವಾರ್ಡಿನ ಕವಿತಾ, ಬೋಳೂರು ವಾರ್ಡಿನ ಲತಾ ಸಾಲ್ಯಾನ್ ನಡುವೆ ಪೈಪೋಟಿ ಇದೆ. ಜೆಸಿಂತಾ ಅವರು ನಾಲ್ಕು ಬಾರಿ ಗೆದ್ದವರು. ಲತಾ ಹಾಗೂ ಕವಿತಾ ಅವರು ಮೊದಲ ಬಾರಿ ಸದಸ್ಯರಾದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.