ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕಲ್ಲಾಪು ಸಮೀಪ ಬೃಹತ್ ಗಾತ್ರದ ಮರವೊಂದು ಶುಕ್ರವಾರ ಮುಂಜಾನೆ ವೇಳೆ ರಸ್ತೆಗಡ್ಡವಾಗಿ ಉರುಳಿ ಬಿದ್ದ ಕಾರಣ ಹೆದ್ದಾರಿಯುದ್ದಕ್ಕೂ ಸಂಚಾರ ಅಸ್ತವ್ಯಸ್ತವಾಯಿತು.
ಗುರುವಾರ ಸಂಜೆ ನೇತ್ರಾವತಿ ಸೇತುವೆಯಲ್ಲಿ ಲಾರಿ ಕೆಟ್ಟು ನಿಂತಿದ್ದರಿಂದ ತೊಂದರೆ ಅನುಭವಿಸಿದ್ದ ಪ್ರಯಾಣಿಕರು ಕೆಲಸದ ಕಚೇರಿ ಹಾಗೂ ಶಾಲೆಯಿಂದ ಮನೆಗೆ ತಲುಪಲು ತಡವಾದರೆ, ಶುಕ್ರವಾರ ರಸ್ತೆಗೆ ಅಡ್ಡವಾಗಿ ಬಿದ್ದ ಮರದಿಂದಾಗಿ ಕಚೇರಿ ಮತ್ತು ಶಾಲೆಗೆ ತಲುಪುವಲ್ಲಿ ತಡವಾಯಿತು. ಮೂರು ತಿಂಗಳಿನಲ್ಲಿ ತೊಕ್ಕೊಟ್ಟು ನೇತ್ರಾವತಿ ಸೇತುವೆ ಭಾಗದಲ್ಲಿ ಆಗುತ್ತಿರುವ ತೊಂದರೆಯಿಂದಾಗಿ ಈ ಭಾಗದ ಪ್ರಯಾಣಿಕರು ಗಂಟೆಗಳಿಗೂ ಅಧಿಕ ಕಾಲ ರಸ್ತೆಯಲ್ಲಿ ಠಿಕಾಣಿ ಹೂಡುವಂತಾಯಿತು. ಶುಕ್ರವಾರದ ರಸ್ತೆ ಸಂಚಾರ ವ್ಯತ್ಯಯದಲ್ಲಿ ಆಂಬ್ಯುಲೆನ್ಸ್‌ಗಳು ಬಾಕಿಯಾಗಿದ್ದು, ಅದರೊಳಗಿನಿಂದ ಸಂಬಂಧಿಕರ ಅಳು ಮುಗಿಲು ಮುಟ್ಟಿತ್ತು.
ಮೂರು ದಿನಗಳಿಂದ ನಿರಂತರ ಸುರಿದ ಭಾರೀ ಮಳೆಯಿಂದಾಗಿ ಮರ ಉರುಳಿಬಿದ್ದಿದೆ. ಬೆಳಿಗ್ಗೆಯಿಂದ ಮೂರು ಗಂಟೆಗಳ ಕಾಲ ರಸ್ತೆ ಸಂಚಾರ ವ್ಯತ್ಯಯವಾಗಿದ್ದರಿಂದ ವಾಹನಗಳ ಸರತಿ ಸಾಲು ಎರಡು ಕಿ.ಮೀ ವರೆಗೆ ವ್ಯಾಪಿಸಿತ್ತು. ಮಂಗಳೂರು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.