ADVERTISEMENT

ಹೊಸ ವರ್ಷ: ಹೋಟೆಲ್‌ ತಿನಿಸು ದುಬಾರಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 6:51 IST
Last Updated 3 ಜನವರಿ 2014, 6:51 IST

ಮಂಗಳೂರು: ವರ್ಷದುದ್ದಕ್ಕೂ ಬೆಲೆ ಏರಿಕೆಯಿಂದ ಸುದ್ದಿ ಮಾಡಿದ್ದ ಕೇಂದ್ರ ಸರ್ಕಾರ ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ (19 ಕೆ.ಜಿ) ದರವನ್ನು ಒಂದೇ ಸಲ ₨ 385ರಷ್ಟು ಏರಿಕೆ ಮಾಡಿರುವುದು ಹೋಟೆಲ್‌ ಹಾಗೂ ಕೇಟರಿಂಗ್‌ ಉದ್ಯಮಿಗಳನ್ನು ಕಂಗೆಡಿಸಿದೆ. ಕೆಲವು ಹೋಟೆಲ್‌ಗಳು ಈಗಾಗಲೇ ಇದರ ಬಿಸಿಯನ್ನು ಗ್ರಾಹಕರಿಗೆ ವರ್ಗಾಯಿಸಿವೆ. ಇನ್ನು ಕೆಲವು ಹೋಟೆಲ್‌ಗಳು, ತಿನಿಸುಗಳ ಬೆಲೆ ಏರಿಸಲು ಚಿಂತನೆ ನಡೆಸಿವೆ. 

ಎಂದಿನಂತೆ ಹೋಟೆಲ್‌ಗೆ ಹೋದ ಕಾಯಂ ಗಿರಾಕಿಗಳು ಹೊಸ ವರ್ಷದ ಮೊದಲ ದಿನವೇ ಬೆಚ್ಚಿ ಬೀಳಬೇಕಾಯತು. ನಗರದ ಕೆಲವು ಹೋಟೆಲ್‌ಗಳು ಒಂದು ಲೋಟ ಚಹಾ ಬೆಲೆಯನ್ನು ₨ 3ರಿಂದ  ₨ 5ರಷ್ಟು, ಊಟದ ದರವನ್ನೂ ₨ 5ರಿಂದ ₨10ರಷ್ಟು ಏರಿಕೆ ಮಾಡಿವೆ. ಸಾಮಾನ್ಯ ಹೋಟೆಲ್‌ಗಳಲ್ಲೂ ಚಹಾ, ಕಾಫಿ ಬೆಲೆ ₨ 15ಕ್ಕೆ, ಊಟದ ಬೆಲೆ ₨50ಕ್ಕೆ ಏರಿದೆ.

2 ತಿಂಗಳಲ್ಲಿ ₨ 500 ತುಟ್ಟಿ
‘ಒಂದೇ ಬಾರಿ ಪ್ರತಿ ಸಿಲಿಂಡರ್‌ಗೆ ₨ 385ರಷ್ಟು ಹೆಚ್ಚಳವಾಗಿದೆ. ಎರಡು ತಿಂಗಳಲ್ಲಿ ಸಿಲಿಂಡರ್‌ ಬೆಲೆ ₨ 500ಗಿಂತಲೂ ಹೆಚ್ಚಾಗಿದೆ. ಮೂರು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ಸಿಲಿಂಡರ್‌ ದರ ಎರಡಕ್ಕಿಂತಲೂ ಹೆಚ್ಚು ಪಟ್ಟು ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ಆಹಾರ ಉದ್ಯಮವು ಇಂಧನಕ್ಕೆ ಸಂಪೂರ್ಣ ಅಡುಗೆ ಅನಿಲವನ್ನೇ ನೆಚ್ಚಿಕೊಂಡಿದೆ.

ಬೆಲೆ ಏರಿಕೆಯ ಆಘಾತವನ್ನು  ತಡೆದು­ಕೊಳ್ಳುವು­ದಾದರೂ ಹೇಗೆ?’ ಎಂದು ಪ್ರಶ್ನಿಸುತ್ತಾರೆ ಕ್ಯಾಂಟೀನ್‌ ಹಾಗೂ ಕೇಟರಿಂಗ್‌ ಉದ್ಯಮವನ್ನು ನಡೆಸುತ್ತಿರುವ ರಾಜೇಶ್ವರ ಭಟ್‌. ‘ಕೆಲಸದಾಳುಗಳ ಕೊರತೆ, ತೆರಿಗೆ ಹೆಚ್ಚಳದಿಂದಾಗಿ ಹೋಟೆಲ್‌ ಉದ್ದಿಮೆ ಮೊದಲೇ ಸಂಕಷ್ಟದಲ್ಲಿದೆ. ಅದರ ಬೆನ್ನಲ್ಲೇ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಸಿಲಿಂಡರ್ ಬೆಲೆ ಹೆಚ್ಚಿಸಿದರೆ, ನಾವು ಉದ್ಯಮ ನಡೆಸುವುದು ಕಷ್ಟ.

ಕೇವಲ ಅಡುಗೆ ಅನಿಲ ಸಿಲಿಂಡರ್‌ ಮಾತ್ರವಲ್ಲ, ಅದರೊಂದಿಗೆ ತರಕಾರಿ, ಬೇಳೆ ಮೊದಲಾದ ಕಚ್ಚಾವಸ್ತುಗಳ ಬೆಲೆಯೂ ಹೆಚ್ಚುತ್ತದೆ. ಏಪ್ರಿಲ್‌ನಿಂದ ನಮ್ಮ  ಸಿಬ್ಬಂದಿಯ ತುಟ್ಟಿಭತ್ಯೆಯನ್ನೂ ಹೆಚ್ಚಿಸಬೇಕಾಗುತ್ತದೆ. ಹಾಗಾಗಿ ಹೋಟೆಲ್‌ ತಿಂಡಿ ತಿನಿಸುಗಳ ಬೆಲೆಯನ್ನೂ ಶೇ 15ರಿಂದ ಶೇ 20ರಷ್ಟು ಹೆಚ್ಚಿಸುವುದು ಅನಿವಾರ್ಯ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್‌್ ಮತ್ತು ರೆಸ್ಟೋರಂಟ್‌ ಮಾಲೀಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ.

‘ನಾವು ಶುಕ್ರವಾರ ಸಂಘದ ಸಭೆ ಸೇರಿ ಬೆಲೆ ಏರಿಕೆ ನಿಯಂತ್ರಿ­ಸುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿ­ದ್ದೇವೆ. ಖರ್ಚು ವೆಚ್ಚ ನೋಡಿಕೊಂಡು ಹೋಟೆಲ್‌ ಮಾಲೀ­ಕರು ತಿಂಡಿತಿನಿಸುಗಳ ಬೆಲೆ ಏರಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT