ADVERTISEMENT

‘ಆಧಾರ್‌ ಕಡ್ಡಾಯ ಮಾಡಬೇಡಿ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 10:07 IST
Last Updated 23 ಸೆಪ್ಟೆಂಬರ್ 2013, 10:07 IST

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಎಲ್ಲ ನಾಗರಿಕರಿಗೆ ಇನ್ನೂ ಆಧಾರ್‌ ಕಾರ್ಡ್‌ ಸಿಗದೇ ಇರುವುದರಿಂದ ಪಡಿತರ ವಿತರಣೆಗೆ ಆಧಾರ್‌ನ್ನು ಮುಂದಿನ ತಿಂಗಳು ಕಡ್ಡಾಯ ಮಾಡಬಾರದು ಎಂದು ಗ್ಯಾಸ್‌ ಮತ್ತು ಪಡಿತರ ಬಳಕೆದಾರರ ವೇದಿಕೆಯ ಅಧ್ಯಕ್ಷ ಧರ್ಮೇಂದ್ರ ಕೆ. ಹೇಳಿದರು.

ಅವರು ಭಾನುವಾರ ನಗರದ ಹಿದಾಯತ್‌ ಸೆಂಟರ್‌ನಲ್ಲಿ ನಡೆದ ಗ್ಯಾಸ್‌ ಮತ್ತು ಪಡಿತರ ಬಳಕೆದಾರರ ವೇದಿಕೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಕ್ಟೋಬರ್‌ನಿಂದ ಪಡಿತರ ಸಾಮಗ್ರಿ ಪಡೆಯಲು ಆಧಾರ್‌ ಸಂಖ್ಯೆ ನೀಡು­ವುದನ್ನು ಕಡ್ಡಾಯ­ಗೊಳಿಸ­ಲಾಗುವುದು ಎಂಬ ಮಾಹಿತಿ ಇದೆ. ಆದರೆ ಆಧಾರ್‌ ಕೇಂದ್ರಗಳೇ ಕಡಿಮೆ ಇರುವುದರಿಂದ ಈಗಲೇ ಆಧಾರ್‌ ಕಡ್ಡಾಯಗೊಳಿಸ­ಬಾರದು ಎಂದು ಅವರು ಹೇಳಿದರು.

ಬಜೆ್ಪಯಲ್ಲಿ ಅಡುಗೆ ಅನಿಲವನ್ನು ಮನೆಬಾಗಿಲಿಗೆ ವಿತರಿಸದೇ ರಸ್ತೆಯಲ್ಲೇ ನಿಂತು ಸಿಲಿಂಡರ್‌ಗಳನ್ನು ಕೊಂಡೊ­ಯ್ಯು­ವಂತೆ ಸೂಚಿಸಲಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ದೂರು ಹೇಳಿ­ಕೊಂಡರು. ಅದೇ ರೀತಿ ಅಡುಗೆ ಅನಿಲ ಬುಕ್‌ ಮಾಡಿದ ನಂತರ ಎರಡು ವಾರ­ಗಳ ಕಾಲ ಕಾಯಬೇಕಾಗುತ್ತದೆ. 48 ಗಂಟೆಯೊಳಗೆ ಸಿಲಿಂಡರ್‌ ನೀಡ­ಬೇಕೆಂಬ ನಿಯಮವನ್ನು ಏಜೆನ್ಸಿಗಳು ಪಾಲಿಸು­ತ್ತಿಲ್ಲ. ಆಹಾರ ಮತ್ತು ನಾಗರಿಕ ಸರಬ­ರಾಜು ಇಲಾಖೆ ಉಪನಿರ್ದೇಶಕರಿಗೆ ದೂರು ಸಲ್ಲಿಸಿ­ದರೂ ಏನೂ ಪ್ರಯೋ­ಜನವಾಗಿಲ್ಲ ಎಂದು ವೇದಿಕೆಯ ಸದಸ್ಯ­ರು ಹೇಳಿ­ದರು.

ಇದಕ್ಕೆ ಪ್ರತಿಕ್ರಿಯಿಸಿದ ವೇದಿಕೆ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಅವರ ಗಮನಕ್ಕೆ ತರ­ಲಾಗುವುದು. ಹಾಗೂ ಸಮಸ್ಯೆ­ಗಳನ್ನು ಬಿಂಬಿಸುವ ಸಾಕ್ಷ್ಯ ಚಿತ್ರ ನಿರ್ಮಿಸ­ಲಾಗುವುದು ಎಂದು ಹೇಳಿ­ದರು.

ಈ ಸಂದರ್ಭದಲ್ಲಿ ಹೊಸ ಕಾರ್ಯಕಾರಿ ಸಮಿತಿ ರಚನೆಗಾಗಿ 25 ಮಂದಿಯನ್ನು ಆಯ್ಕೆ ಮಾಡ­ಲಾಯಿ­ತು. ಈ ಪದಾಧಿಕಾರಿಗಳು ಸಭೆ ಸೇರಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಕಾರ್ಯದರ್ಶಿ ಸಿದ್ದಿಕ್‌ ಜಕ್ರಿಬೆಟ್ಟು ಹೇಳಿದರು. ವೇದಿಕೆ­ಯಲ್ಲಿ ಉಪಾಧ್ಯಕ್ಷರಾದ ವಿಶ್ವನಾಥ್‌ ಕೆ.ಬಿ., ರೇಖಾ ಬಾಳಿಗಾ ಉಪಸ್ಥಿತ­ರಿದ್ದರು. ಅಜಯ್‌ಕುಮಾರ್‌ ಲೆಕ್ಕ ಪತ್ರ ಮಂಡಿಸಿದರು. ಆಯೇಷಾ ಸ್ವಾಗತಿಸಿ­ದರು. ಮಹಮ್ಮದ್‌ ಮಸ್ಲಿನ್‌, ಅಬ್ದುಲ್‌ ಸಲಾಂ ಮತ್ತಿತರರು ಭಾಗ­ವಹಿ­ಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.