ADVERTISEMENT

‘ಆರೋಗ್ಯ ಕ್ಷೇತ್ರ–ಆಧುನಿಕ ಜ್ಞಾನ ಕಡ್ಡಾಯ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 6:56 IST
Last Updated 3 ಜನವರಿ 2014, 6:56 IST

ಮಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಪ್ರತಿನಿತ್ಯ ಎಂಬಂತೆ ತಂತ್ರಜ್ಞಾನಗಳು, ರೋಗ ನಿಯಂತ್ರಣ ವಿಧಾನಗಳು ಬದಲಾಗುತ್ತಿದ್ದು, ವೈದ್ಯರು ಇಂತಹ ಆಧುನಿಕ ಜ್ಞಾನವನ್ನು ಹೊಂದಿರಲೇಬೇಕು. ಬದಲಾದ ಕಾಲಕ್ಕೆ ತಕ್ಕಂತೆ ತಾಂತ್ರಿಕ ನೈಪುಣ್ಯತೆ ಗಳಿಸಿಕೊಳ್ಳದಿದ್ದರೆ ಶಸ್ತ್ರಚಿಕಿತ್ಸಕ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಅಪಾಯ ಇದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಸಮ ಕುಲಪತಿ ಡಾ.ಸುರೇಂದ್ರ ಶೆಟ್ಟಿ ಹೇಳಿದ್ದಾರೆ.

ಅವರು ಗುರುವಾರ ಇಲ್ಲಿನ ಟಿ.ಎಂ.ಪೈ ಸಭಾಂಗಣ ದಲ್ಲಿ ಕೆಎಂಸಿ ಆಸ್ಪತ್ರೆಯ ವತಿಯಿಂದ ಹಮ್ಮಿ ಕೊಳ್ಳಲಾದ ‘ಹೃದಯ ಚಿಕಿತ್ಸೆಯಲ್ಲಿ ಇತ್ತೀಚಿನ ಬೆಳವಣಿಗೆಗಳು’ ಎಂಬ ವಿಷಯದ ಮೇಲಿನ ವೈದ್ಯಕೀಯ ಕಾರ್ಯಾಗಾರ ‘ರಿದಂ–2014’ ಉದ್ಘಾಟಿಸಿ ಮಾತನಾಡಿದರು.
ಜೀವನ ವಿಧಾನದಲ್ಲಿನ ಬದಲಾವಣೆಯೇ ಹೃದಯ ರೋಗ ಹೆಚ್ಚಲು ಕಾರಣ. ಹೃದಯ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಉನ್ನತ ತಂತ್ರಜ್ಞಾನಗಳು ಬರುತ್ತಿದ್ದು, ಅವುಗಳ ಬಗ್ಗೆ ತಜ್ಞರು ಜ್ಞಾನ ಹೊಂದಿರಬೇಕು ಎಂದರು.

ದಿನವಿಡೀ ನಡೆದ ಕಾರ್ಯಾಗಾರದಲ್ಲಿ ಅಮೆರಿಕದ ಮೌಂಟ್ ಸೆನೈ ವೈದ್ಯಕೀಯ ಕೇಂದ್ರದ ಹೃದಯರೋಗ ತಜ್ಞೆ ಡಾ.ಅನ್ನಪೂರ್ಣಾ ಕಿಣಿ, ಬೆಂಗಳೂರಿನ ಖ್ಯಾತ ಹೃದಯ ತಜ್ಞರಾದ ಡಾ.ಸಿ.ಎನ್‌.ಮಂಜುನಾಥ್‌, ಡಾ.ವಿವೇಕ್‌ ಜವಳಿ ಸಹಿತ ಹಲವು ತಜ್ಞರು ತಮ್ಮ ಅನುಭವ ಮತ್ತು ಇಂಟರ್‌ವೆನ್ಷನಲ್‌ ಕಾರ್ಡಿಯಾಲಜಿ ವಿಭಾಗದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು.

ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಹೃದಯ ರೋಗ ತಜ್ಞರಾಗಿ, ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಡಾ.ಎ.ವಿ.ಶೆಟ್ಟಿ, ಡಾ.ಎಸ್‌.ಜಿ.ಎಸ್‌.ಪ್ರಭು ಮತ್ತು ಡಾ.ಆರ್‌.ಎಲ್‌.ಕಾಮತ್‌ ಅವರನ್ನು ಸನ್ಮಾನಿಸಲಾಯಿತು. ಕೆಎಂಸಿಯ ಡೀನ್‌ ಡಾ.ವೆಂಕಟರಾಯ ಪ್ರಭು, ವೈದ್ಯಕೀಯ ಅಧೀಕ್ಷಕ ಡಾ.ಆನಂದ ವೇಣುಗೋಪಾಲ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.