ADVERTISEMENT

‘ಎತ್ತಿನಹೊಳೆ-– ಬಿಜೆಪಿಯವರದ್ದು ದ್ವಂದ್ವ ನೀತಿ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 10:10 IST
Last Updated 24 ಮಾರ್ಚ್ 2014, 10:10 IST

ಸುಬ್ರಹ್ಮಣ್ಯ: ನೇತ್ರಾವತಿ ನದಿ ತಿರುವು ಮತ್ತು ಎತ್ತಿನಹೊಳೆ ಯೋಜನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಎರಡೆರಡು ಹೇಳಿಕೆ ನೀಡುತ್ತಾ ದ್ವಂದ್ವನೀತಿ ಅನುಸರಿಸುತ್ತಿರುವುದು ವಿ­ಷಾ­­ದ­ನೀಯ.

ಯಾವುದೇ ವಿಷಯದಲ್ಲಿ ಒಂದೇ ನೀತಿಗೆ ಬದ್ಧರಾಗಿದ್ದು ಸ್ಪಷ್ಟ ನಿಲುವು ಹೊಂದಿದಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ  ಎಂದು ಸುಳ್ಯ ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಡಿ.ವಿ.ಯವರು ಮಂಗಳೂರಿನಲ್ಲಿ ಒಂದು ಹೇಳಿಕೆ ನೀಡಿ ಯೋಜನೆಯ ಅಗತ್ಯವಿಲ್ಲ ಎಂದರು. ಇದೇ ವ್ಯಕ್ತಿ ಘಟ್ಟ ಹತ್ತಿದಾಕ್ಷಣ ಯೋಜನೆಯ ಅಗತ್ಯವಿದೆ ಎಂಬ ವ್ಯತಿರಿಕ್ತ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು ನೇತ್ರಾವತಿ ಮತ್ತು ಎತ್ತಿನಹೊಳೆ ಯೋಜನೆ ಬೇರೆ, ಬೇರೆ. ಆದ್ದರಿಂದ ಚಿಂತೆ ಬೇಡ ಎಂದಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್‌ನವರು ಅಥವಾ ನೈಜ ಪರಿಸರವಾದಿಗಳು ಹೇಳಿದ್ದರೆ ಬಿಜೆಪಿ­ಯವರು ಟೀಕಿಸುತ್ತಿದ್ದರು. ಆದರೆ ಮಂಗಳೂರು ಸಂಸದರು ಈ ಹೇಳಿಕೆ ಕುರಿತು ಮೌನವಾಗಿರುವುದು ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರ ದ್ವಂದ್ವನೀತಿ­ಯನ್ನು ಸೂಚಿಸುತ್ತದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಪೈಕಿ ಕಾಲೇಜು ಅಭಿವೃದ್ಧಿಗಾಗಿ ಪದವಿ ಪೂರ್ವ ಕಾಲೇ­ಜಿಗೆ ಈ ಹಿಂದಿನಂತೆ ಯಥಾವತ್ತಾಗಿ ಅನುದಾನ ಮಂಜೂರು ಮಾಡಿದ್ದರೆ ಪದವಿ ಕಾಲೇಜಿಗೆ ಅದನ್ನು ನಿರಾಕರಿ­ಸಲಾಗಿರುವುದು ಖಂಡನೀಯ.

ಸಂಘ ಪರಿವಾರದವರೇ ಇರುವ ಆಡಳಿತ­ಮಂಡಳಿಯವರ ಈ ತಾರತಮ್ಯ ನೀತಿಯ ವಿರುದ್ಧ ನ್ಯಾಯೋಚಿತವಾಗಿ ಸಲ್ಲಬೇ­ಕಾದ ಅನುದಾನದ ಕುರಿತು ಕಾಲೇಜಿನ ಪ್ರಾಚಾರ್ಯರು ಮೆಲ್ಮನವಿ ಸಲ್ಲಿಸಿ­ದರೂ  ಹಿಂದಿನ ನಿರ್ಣಯದಂತೆ ಅನು­ದಾನ ನೀಡಿಕೆಯನ್ನು ನಿರಾಕರಿಸಲಾಗಿದೆ. ಇದು ಗಂಭೀರ ವಿಚಾರವಾಗಿದ್ದು ಇದನ್ನು ಸಚಿವರ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದರು. ತಾ.ಪಂ.ಸದಸ್ಯೆ ವಿಮ­ಲಾ ರಂಗಯ್ಯ, ಸುಬ್ರಹ್ಮಣ್ಯ ಗ್ರಾ.ಪಂ. ಉಪಾಧ್ಯ್ಯಕ್ಷ ಶಿವ­ರಾಮ ರೈ, ಶೇಷಪ್ಪ ದೇವರಗದ್ದೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.