ADVERTISEMENT

‘ಗ್ರಾಮಸಭೆ ಪ್ರಜಾತಂತ್ರದ ತಾಯಿಬೇರು’

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 9:32 IST
Last Updated 19 ಸೆಪ್ಟೆಂಬರ್ 2013, 9:32 IST

ವಂಡ್ಸೆ (ಬೈಂದೂರು) :   ಸಂವಿಧಾನದ ವಿಧಿಯಂತೆ ಗ್ರಾಮದ ಎಲ್ಲ ಮತದಾರರು ಗ್ರಾಮಸಭೆಯ ಸದಸ್ಯರು. ವರ್ಷದಲ್ಲಿ ಕನಿಷ್ಠ ಎರಡು ಬಾರಿ ನಡೆಯಬೇಕಾದ ಗ್ರಾಮಸಭೆಗೆ ವ್ಯಾಪಕ ಅಧಿಕಾರ ಮತ್ತು ಅವಕಾಶಗಳನ್ನು ನೀಡಲಾಗಿದೆ. ಮತ­ದಾರರು ಇದರಲ್ಲಿ ಭಾಗವಹಿಸಿ, ಊರಿನ ಅಭಿ­ವೃದ್ಧಿಯ ಕುರಿತು ಚರ್ಚಿಸಿ ನಿರ್ಧಾರಗಳನ್ನು ಕೈಗೊ­ಳ್ಳುವ ಮೂಲಕ ಪ್ರಜಾತಂತ್ರದ ತಾಯಿಬೇರು ಎನಿಸಿದ ಅದನ್ನು ಬಲಪಡಿಸಬೇಕು ಎಂದು ವಕೀಲ ಟಿ. ಬಿ. ಶೆಟ್ಟಿ ಹೇಳಿದರು.

ವಂಡ್ಸೆ ಗ್ರಾಮ ಪಂಚಾಯಿತಿಯ ಗ್ರಾಮಸಭೆಯ ಪೂರ್ವಭಾವಿಯಾಗಿ ಗ್ರಾಮ ಪಂಚಾಯಿತಿ ಮತ್ತು ಹಕ್ಕೊತ್ತಾಯ ಆಂದೋಲನ ಜಂಟಿಯಾಗಿ ಶನಿವಾರ ನಡೆಸಿದ ಸಮಾಲೋಚನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು. 

ಭವಿಷ್ಯದ ಯೋಜನೆಯನ್ನು ರೂಪಿಸುವ, ಗ್ರಾಮ­ವ್ಯಾಪ್ತಿಯಲ್ಲಿ ಒದಗಿಸಬೇಕಾದ ನಾಗರಿಕ ಸೌಲ­ಭ್ಯಗಳ ಆದ್ಯತೆ ನಿಗದಿಗೊಳಿಸುವ,  ಫಲಾನುಭವಿ ಆಧರಿತ ಯೋಜನೆಗಳ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ, ಆಡಳಿತದ ಲೋಪದೋಷ, ಆಯವ್ಯಯಗಳನ್ನು ವಿಮರ್ಶಿಸುವ ಹೊಣೆ ಅದ­ರದ್ದು. ಗ್ರಾಮಸಭೆಯಲ್ಲಿ ಭಾಗವಹಿಸಿ ಈ ಅವಕಾಶಗಳನ್ನು ಜನರು ಬಳಸಿಕೊಳ್ಳದಿದ್ದರೆ, ಗ್ರಾಮ­ಸಭೆ ಸೊರಗುತ್ತದೆ. ಅದರ ದುಷ್ಪರಿಣಾಮವನ್ನು ಜನರೇ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಸ್ವಾಗತಿಸಿ ಗ್ರಾಮಸಭೆಯನ್ನು ಮಾದರಿಯಾಗಿ ನಡೆಸಲು ಎಲ್ಲರ ಸಹಕಾರ ಕೋರಿದರು. ವೇದಿಕೆಯಲ್ಲಿದ್ದ ಕುಂದಾಪುರ ದಕ್ಷಿಣ ರೋಟರಿ ಅಧ್ಯಕ್ಷ  ಶ್ರೀಧರ ಶೆಟ್ಟಿ  ಗ್ರಾಮಸಭೆಯ ಯಶಸ್ಸಿಗೆ ಸಹಕರಿಸುವ ಭರವಸೆ ನೀಡಿದರು. ಸಿಡಬ್ಲ್ಯೂಸಿಯ ಸಹ ನಿರ್ದೇಶಕ ವೆಂಕಟೇಶ್‌, ತಾಲ್ಲೂಕು ಪಂಚಾಯತ್‌ ರಾಜ್‌ ಒಕ್ಕೂಟದ ಗೌರವಾಧ್ಯಕ್ಷ ಜನಾರ್ದನ  ಮಾರ್ಗದರ್ಶನ ನೀಡಿದರು.  ಕಾರ್ಯ­ದರ್ಶಿ ಶಂಕರ ಆಚಾರ್ಯ ವಂದಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ಧರ್ಮಸ್ಥಳ ಗ್ರಾಮಾಭಿ­ವೃದ್ಧಿ ಯೋಜನೆಯ ಒಕ್ಕೂಟಗಳ ಪದಾಧಿಕಾ­ರಿಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿ­ಗಳು, ಭಾರತ ನಿರ್ಮಾಣ ಸ್ವಯಂಸೇವಕರು,  ಶ್ರೀಚಕ್ರ ಯುವಕ ಮಂಡಲ, ಹಾಲು ಉತ್ಪಾದಕರ ಸಹಕಾರ ಸಂಘ, ರಿಕ್ಷಾ ಚಾಲಕ, ಮಾಲೀಕರ ಸಂಘದ ಅಧ್ಯಕ್ಷರು, ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರು, ಎಚ್‌ಎಂಸಿ ಫ್ರೆಂಡ್ಸ್‌, ಆಶೀರ್ವಾದ ಫ್ರೆಂಡ್ಸ್‌, ಯುವಶಕ್ತಿ ಮಿತ್ರಮಂಡಳಿ, ಯಕ್ಷ ಯುವ ಸಂಘಟನೆ, ಸಿಡಬ್ಲ್ಯೂಸಿ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.