ಉಳ್ಳಾಲ: ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದಷ್ಟೇ ಬಿಜೆಪಿ ಉದ್ದೇಶವಲ್ಲ. ನಮ್ಮ ಸೈನಿಕರನ್ನು ದಿನಂಪ್ರತಿ ಬಲಿ ಪಡೆಯುತ್ತಿರುವ ಪಾಕಿಸ್ತಾನದಂತಹ ರಾಷ್ಟ್ರದ ಮುಂದೆ ಮುಂದಿನ ಮೂರು ತಿಂಗಳಲ್ಲಿಯೇ ನಮ್ಮ ಶಕ್ತಿ ಏನು ಎಂಬುದನ್ನು ಈ ಜಗತ್ತಿಗೆ ತೋರಿಸುವುದರ ಜೊತೆಗೆ ನಮ್ಮ ದೇಶವನ್ನು ರಕ್ಷಿಸುವ ಕೆಲಸಕ್ಕೆ ಮೋದಿ ಅವರ ನಾಯಕತ್ವದ ಅಗತ್ಯವಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.
ಸೋಮೇಶ್ವರ ಕೊಲ್ಯ ಬ್ಮಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗುಜರಾತಿನ ಅಭಿವೃದ್ಧಿಯ ಬಗ್ಗೆ ಅಪಪ್ರಚಾರ ಮಾಡುವ ಜನಪ್ರತಿನಿಧಿಗಳು ಗುಜರಾತಿಗೆ ಹೋಗಿ ಬಂದು ಅಲ್ಲಿನ ರೈತರ ಹೊಲಗದ್ದೆಗಳಲ್ಲಿ ವರ್ಷದ 365 ದಿನವೂ ನೀರು ಪೂರೈಕೆ ಆಗುತ್ತಿರುವುದನ್ನು, ದಿನದ 24ಗಂಟೆ ಎಲ್ಲ ಕ್ಷೇತ್ರಗಳಿಗೂ ವಿದ್ಯುತ್ ಪೂರೈಕೆ ಆಗುವುದನ್ನು ನೋಡಿ ಮತ್ತೆ ಅಪಪ್ರಚಾರ ಮಾಡಿದರೆ ಅಡ್ಡಿ ಇಲ್ಲ.
ಮಳೆ ಇಲ್ಲದ ಸಂದರ್ಭದಲ್ಲಿ ಅಲ್ಲಿ 20 ಜನ ರೈತರು ಸೇರಿ ಸಂಘ ಕಟ್ಟಿಕೊಂಡು ರೈತರ ಭೂಮಿಗೆ ನೀರು ಕೊಡುವ ಕಾರ್ಯ ಮಾಡುತ್ತಿದೆ. ಶಿಕ್ಷಣ, ನೀರಾವರಿ, ಉದ್ಯಮ ಎಲ್ಲ ಕ್ಷೇತ್ರದಲ್ಲೂ ಗುಜರಾತ್ ಮುಂದಿದೆ ಎಂಬುದಕ್ಕೆ ದಾಖಲೆ ಸಾದರಪಡಿಸಿದ್ದು ಅಂತಹ ಕ್ರಾಂತಿಗೆ ಕಾರಣರಾದ ಮೋದಿ ಅವರು ಪ್ರಧಾನಿಯಾದರೆ ಭಾರತವೂ ಪ್ರಪಂಚದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂಬುದು ಜನತೆಯ ಆಶಯ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಮ್ಮ ದೇಶ ಎಲ್ಲ ವಿಧದಲ್ಲೂ ಇತರ ದೇಶಗಳ ಮುಂದೆ ತಲೆ ತಗ್ಗಿಸುವಂತಾಗಿದೆ. ಕೋಮುವಾದಿ ಎಂಬ ಆರೋಪ ಹೊರಿಸಿದ ಅಮೇರಿಕಾ ದೇಶದ ರಾಯಭಾರಿ ಗುಜರಾತಿನ ಅಭಿವೃದ್ಧಿ ಕಂಡು ಅಧ್ಯಯನ ತಂಡವನ್ನು ಗುಜರಾತಿಗೆ ಕಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸದನಾಗಿ ಐದು ವರ್ಷದಲ್ಲಿ ಸಿಗುವ ಸಂಸದರ ನಿಧಿಯ ಮೊತ್ತ ₨19 ಕೋಟಿ ಆಗಿದ್ದರೂ ಅದನ್ನು ಸಮಯ ಸಂದರ್ಭಕ್ಕೆ ತಕ್ಕಂತೆ ಸಮರ್ಥವಾಗಿ ಬಳಸಿದ, ರಾಜ್ಯದಲ್ಲಿಯೇ ಅತಿ ಹೆಚ್ಚು ಅನುದಾನ ಜಿಲ್ಲೆಗೆ ತರಿಸಿದ ರಾಜ್ಯದ ಏಕಮೇವ ಸಂಸದ ಎಂಬ ಹೆಮ್ಮೆ ನನಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಜಿಲ್ಲಾ ಕಾರ್ಯದರ್ಶಿ ಬಾಬು ಬಂಗೇರ, ರಾಜ್ಯ ಪರಿಷತ್ ಸದಸ್ಯ ಸೀತಾರಾಮ ಬಂಗೇರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸತೀಶ್ ಕುಮಾರ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್, ಜಯಶ್ರೀ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜೀವಿ ಕೆಂಪುಮಣ್ಣು, ಎಪಿಎಂಸಿ ಅಧ್ಯಕ್ಷ ಪ್ರಶಾಂತ್ ಗಟ್ಟಿ ಕುರ್ನಾಡು, ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖ್ ರವೀಂದ್ರ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಶ್ರೀಕರ ಪ್ರಭು, ಮಂಡಲ ಪ್ರಧಾನ ಕಾರ್ಯದರ್ಶಿ ಸಂಜೀವ ಶೆಟ್ಟಿ ಅಂಬ್ಲಮೊಗರು, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಸ್ವಾಗತಿಸಿದರು. ಕ್ಷೇತ್ರ ಕಾರ್ಯದರ್ಶಿ ಹರಿಯಪ್ಪ ಸಾಲ್ಯಾನ್ ಹಾಗೂ ಹರೀಶ್ ಅಂಬ್ಲಮೊಗರು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ಅಮೀನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.