ಹೆಬ್ರಿ: ದೇಶವನ್ನು ಉಳಿಸುವ ಕೆಲಸ ಮತ್ತು ದೇಶದ ಅಭಿವೃದ್ಧಿ ಕಾರ್ಯ ಮೋದಿಯಿಂದ ಮಾತ್ರ ಸಾಧ್ಯ. ಮೋದಿಯೇ ಪ್ರಧಾನಿ ಎಂದು ಎಲ್ಲಾ ಸಮೀಕ್ಷೆಗಳಲ್ಲಿ ಕಾಣುತ್ತಿದ್ದೇವೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಹೆಬ್ರಿಯ ತಾಣ ಅರ್ಧನಾರೀಶ್ವರ ಸನ್ನಿಧಿಯಲ್ಲಿ ಮಂಗಳವಾರ ನಡೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನಿಂದಲೇ ಪಕ್ಷದ ಪ್ರಮುಖರು ಕಾರ್ಯಕರ್ತರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಮೋದಿ ಪರವಾಗಿ ಮತಯಾಚನೆ ನಡೆಸಿ ದೇಶದ ರಕ್ಷಣೆಯಲ್ಲಿ ಒಂದೇ ಮನಸ್ಸಿನ ದುಡಿಯಬೇಕಾಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗಾಗಿ ಏನೂ ಬೇಕಾದರೂ ಮಾಡಲು ಸಿದ್ಧವಿದೆ. ಇಂತಹ ಘಟನೆಗಳಿಗೆ ಕೊನೆಗಾಣಿಸಲು ಮೋದಿಯೊಂದೇ ಪರಿಹಾರ ಎಂದ ಈಶ್ವರಪ್ಪ ದೇಶದ ರಕ್ಷಣೆ ಜನಪರ ಆಡಳಿತಕ್ಕೆ ಬಿಜೆಪಿಯನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಚುನಾವಣೆಯನ್ನು ನಿರ್ಲಕ್ಷ್ಯ ಮಾಡದೆ ಬಲಿಷ್ಠ ಭಾರತ ಕಟ್ಟಲು ಮೋದಿ ಬೆಂಬಲಿಸಲು ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರದಲ್ಲಿ ಪಕ್ಷದ ಪ್ರಮುಖರಿಗೆ ವಿವಿಧ ಜವಾಬ್ದಾರಿ ಮತ್ತು ಮತಪ್ರಚಾರದ ವಿವಿಧ ನಿರ್ವಹಣೆಯ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮೂಡಿಗೆರೆಯ ಕುಮಾರ ಸ್ವಾಮಿ, ತರಿಕೆರೆಯ ಶಿವಶಂಕರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಕಾರ್ಯದರ್ಶಿ ಶ್ಯಾಮಲ ಎಸ್.ಕುಂದರ್, ಉಡುಪಿ ಜಿಲ್ಲಾ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಾರ್ಯದರ್ಶಿ ಮಾಲಿನಿ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.