ADVERTISEMENT

‘ಪ್ರತಿ ಕಾರ್ಯದ ಒಂದು ಭಾಗ ರಾಷ್ಟ್ರಕ್ಕಾಗಿ ಮೀಸಲಿಡಿ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 10:26 IST
Last Updated 25 ಸೆಪ್ಟೆಂಬರ್ 2013, 10:26 IST

ಮಂಗಳೂರು: ‘ಎಲ್ಲರ ಮೇಲೆ ರಾಷ್ಟ್ರದ ಋಣವಿದೆ. ಈ ಋಣ ತೀರಿಸುವ ಬಗ್ಗೆ ಎಲ್ಲರೂ ಕಟಿಬದ್ಧರಾಗಬೇಕು. ನಮ್ಮ ಯಾವುದೇ ಕಾರ್ಯದ  ಒಂದು ಭಾಗ ರಾಷ್ಟ್ರಕ್ಕಾಗಿ ಮೀಸಲಿರಬೇಕು’ ಎಂದು ನಗರದ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜಿ ಅವರು ಹೇಳಿದರು.

ಇಲ್ಲಿನ ರಾಮಕೃಷ್ಣ ಕಾಲೇಜಿನ ಆಶ್ರಯದಲ್ಲಿ ಬಂಟ್ಸ್‌ ಹಾಸ್ಟೆಲ್‌ನ ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಸಾಮಾನ್ಯ ಜನರ ದುಡಿಮೆಯ ಫಲವಾಗಿ ಯುವಜನರಿಗೆ ವಿದ್ಯಾವಂತರಾಗುವ ಅವಕಾಶ ಸಿಕ್ಕಿದೆ. ವಿದ್ಯಾಭ್ಯಾಸದ ಬಳಿಕ ರಾಷ್ಟ್ರದ ಋಣ ತೀರಿಸದಿದ್ದರೆ ವಂಚನೆ ಮಾಡಿದಂತೆ. ಯುವಜನರ ನಡೆ ನುಡಿ ರಾಷ್ಟ್ರಗೌರವವನ್ನು ಎತ್ತಿ ಹಿಡಿಯುವಂತಿರಬೇಕು. ದೇಶದ ಪ್ರಜೆಗಳೆಲ್ಲರೂ ನಮ್ಮವರು, ದೇಶದ ಸ್ವತ್ತುಗಳು ನಮ್ಮವು ಎಂಬ ಭಾವನೆ ಬೆಳೆಸಿಕೊಂಡು ಅವುಗಳ ರಕ್ಷಣೆಗೆ ಕಟಿಬದ್ಧರಾಗಬೇಕು. ನಮ್ಮ ಪಾಲಿನ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡುವುದು ಕೂಡಾ ರಾಷ್ಟ್ರ ಸೇವೆ’ ಎಂದರು.

‘ಮುಕ್ತ ಮನಸ್ಸನ್ನು ಹೊಂದಿದ್ದರಿಂದಾಗಿ ಭಾರತ ಸಮೃದ್ಧಿಯನ್ನು ಕಂಡಿತ್ತು. ಈಗ ದೇಶದಲ್ಲಿ ಮೌಲ್ಯಗಳ ಕುಸಿತವನ್ನು ಕಾಣುತ್ತಿದ್ದೇವೆ. ಯುವ ಜನತೆಯಿಂದ ರಾಷ್ಟ್ರದ ಪುನರುತ್ಥಾನ ಸಾಧ್ಯ ಎಂದು ವಿವೇಕಾನಂದರು ನಂಬಿದ್ದರು. ಅವರ ಚಿಂತನೆಯಲ್ಲಿ ಸ್ಪಷ್ಟತೆ ಇತ್ತು. ಉತ್ಕಟ ರಾಷ್ಟ್ರಾಭಿಮಾನ ಹೊಂದಿದ್ದ ಅವರು ದೇಶವು ಬಲಿಷ್ಠ ರಾಷ್ಟ್ರವಾಗಿ ವಿಶ್ವಕ್ಕೆ ದಾರಿ ತೋರಿಸುತ್ತದೆ ಎಂಬ ಅಚಲ ವಿಶ್ವಾಸ ಹೊಂದಿದ್ದರು. ಅವರ ಚಿಂತನೆಗಳಿಗೂ ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯಕ್ಕೂ ನಿಕಟ ಸಂಬಂಧವಿದೆ. ಅವರ ಚಿಂತನೆ ಯುವಜನತೆಗೆ ಪ್ರೇರಣೆ ಆಗಬೇಕು’ ಎಂದರು.

ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಡಾ.ನವೀನ್‌ ಶೆಟ್ಟಿ ಮಾತನಾಡಿ, ‘ಸ್ವಾರ್ಥಕ್ಕಾಗಿ ಜೀವಿಸುವವರು ಬದುಕಿದ್ದೂ ಸತ್ತಂತೆ. ಪರರಿಗಾಗಿ ಬದುಕುವುದೇ ಜೀವನಧರ್ಮ ಎಂಬ ವಿವೇಕಾನಂದರ ಮಾತಿನ ಸಾರವನ್ನು ಯುವಜನತೆ ಅರ್ಥೈಸಿಕೊಳ್ಳಬೇಕು’ ಎಂದರು.

ಕಾಲೇಜಿನ ಸಂಚಾಲಕ ಎಂ.ಸುಂದರ ಶೆಟ್ಟಿ, ರಾಷ್ಟ್ರೀಯ ಸೇವಾ ಯೊಜನೆಯ ಮಾಜಿ ಸಂಯೋಜಕರಾದ ಶ್ರೀಪತಿ ರಾವ್‌ ಪ್ರೊ.ಕೆ.ನಾರಾಯಣ್‌, ಡಾ.ಕೆ.ಸುಬ್ರಹ್ಮಣ್ಯ ಭಟ್‌, ಗೋಪಾಲ್‌, ಡಾ.ಗಣನಾಥ ಎಕ್ಕಾರ್‌, ಕಾಲೇಜಿನ ಎಸ್‌ಎಸ್‌ಎಸ್‌ ಅಧಿಕಾರಿ ಶ್ವೇತಾ, ನಟೇಶ್‌ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್‌ ಸಂಯೋಜಕಿ ಪ್ರೊ.ವಿನೀತಾ ಸ್ವಾಗತಿಸಿದರು. ಉಷಾ ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.