ಮಂಗಳೂರು: ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಗಿನ್ನೆಸ್ ದಾಖಲೆ ಮಾಡಲು ಇದೇ 11ರಂದು ಜಿಲ್ಲೆಯ ವಿವಿಧೆಡೆ ‘ಭವಿಷ್ಯತ್ತಿಗಾಗಿ ಯೋಗ–2013’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಇಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಆ ದಿನ ಬೆಳಿಗ್ಗೆ 10ರಿಂದ 10.30ರವರೆಗೆ ಏಕಕಾಲಕ್ಕೆ ಅತಿ ಹೆಚ್ಚು ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಮತ್ತು ವಿವಿಧ ಆಸನಗಳ ಮೂಲಕ ಯೋಗ ಪ್ರಾತ್ಯಕ್ಷಿಕೆ ನಡೆಸುವರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿ ಸುಮಾರು 75 ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದಾಖಲೆ ನಿರ್ಮಿಸುವರು ಎಂದರು.
ನಗರದ ಶಾರದಾ ವಿದ್ಯಾಲಯದಲ್ಲಿ 2 ಸಾವಿರ, ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ 3,500, ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಲಯದಲ್ಲಿ 3 ಸಾವಿರ, ಅಳಿಕೆಯ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ 1,100, ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ 3 ಸಾವಿರ, ಪುತ್ತೂರಿನ ವಿವೇಕಾನಂದ ಶಾಲಾ ಮೈದಾನದಲ್ಲಿ 6 ಸಾವಿರ, ಕೊಂಬೆಟ್ಟು ಶಾಲಾ ಮೈದಾನದಲ್ಲಿ 3 ಸಾವಿರ, ಸೇಂಟ್ ಫಿಲೋಮಿನಾ ಶಾಲಾ ಮೈದಾನದಲ್ಲಿ 2 ಸಾವಿರ, ರಾಮಕುಂಜ ಶಾಲಾ ಮೈದಾನದಲ್ಲಿ 2 ಸಾವಿರ, ಸುಳ್ಯದ ಕೆವಿಜಿ ಶಾಲಾ ಮೈದಾನದಲ್ಲಿ 2 ಸಾವಿರ ವಿದ್ಯಾರ್ಥಿಗಳು ಸೇರಿ 10 ಕೇಂದ್ರಗಳಲ್ಲಿ 150 ಶಾಲೆಗಳಿಂದ 27,600 ವಿದ್ಯಾರ್ಥಿಗಳು ಭಾಗವಹಿಸುವರು. 1500 ಶಿಕ್ಷಕರು ಮತ್ತು 500 ಸ್ವಯಂಸೇವಕರು ಪಾಲ್ಗೊಳ್ಳುವರು ಎಂದು ಅವರು ಮಾಹಿತಿ ನೀಡಿದರು.
ಜಗತ್ತಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಭ್ಯಾಸ ನಡೆಸುವುದರ ಮೂಲಕ ಈ ಕಾರ್ಯಕ್ರಮ ಗಿನ್ನೆಸ್ ದಾಖಲೆಗೆ ಸೇರಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ವಾರ್ತಾ ಇಲಾಖೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಲಿವೆ ಎಂದರು.
ಚಿತ್ರ ನಿರ್ದೇಶಕ ಕಿಶನ್ ಮಾತನಾಡಿ, ‘ಈ ಕಾರ್ಯಕ್ರಮದ ರಾಯಭಾರಿಯಾಗಿ ಭಾಗವಹಿಸುತ್ತಿದ್ದೇನೆ’ ಎಂದರು. ಯೋಗದ ಬಗ್ಗೆ ಇತ್ತೀಚಿನ ಪೀಳಿಗೆಗೆ ತಿಳಿದಿಲ್ಲ. ಅದನ್ನು ತಿಳಿಸುವ ಪ್ರಯತ್ನವೇ ಭವಿಷ್ಯತ್ತಿಗಾಗಿ ಯೋಗ ಕಾರ್ಯಕ್ರಮ. ಈ ಮೂಲಕ ಎಲ್ಲರಿಗೂ ಅವಕಾಶ ಲಭಿಸುತ್ತದೆ ಎಂದರು.
ಸಚಿವ ಯು.ಟಿ.ಖಾದರ್ ಮಾತನಾಡಿ, ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು. ಯೋಗ ಕಾರ್ಯಕ್ರಮದ ಮೂಲಕ ಜಿಲ್ಲೆಯ ಸ್ವಾಭಿಮಾನ ವೃದ್ಧಿಯಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಗುರಿಯೂ ಈ ಜಿಲ್ಲೆಗಳಿಗೆ ಲಭಿಸಲಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ಮೋಸೆಸ್ ಜಯಶೇಖರ್, ತಹಶೀಲ್ದಾರ್ ಮೋಹನ್ ರಾವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.