ADVERTISEMENT

‘ಮಾತೃಭಾಷೆ ತೆಲುಗು, ಆಂಡ ತುಳು ಪಂಡ ಇಷ್ಟ...’

‘ರಂಗ್‌’ ತುಳು ಚಿತ್ರದಲ್ಲಿ ಜಾನಿ ಲಿವರ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:20 IST
Last Updated 5 ಡಿಸೆಂಬರ್ 2013, 8:20 IST

ಮಂಗಳೂರು: ಕಟೀಲೇಶ್ವರಿ ಕಂಬೈನ್ಸ್ ನಿರ್ಮಿಸುತ್ತಿರುವ ತುಳು ಚಿತ್ರ ‘ರಂಗ್’ನಲ್ಲಿ ಬಾಲಿವುಡ್‌ನ  ಖ್ಯಾತ ಹಾಸ್ಯನಟ ಜಾನಿ ಲಿವರ್ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ. ‘ರಂಗ್’ ಚಿತ್ರದ ಹಾಡೊಂದರಲ್ಲಿ ಜಾನಿ ಲಿವರ್ ಅಭಿನಯಿಸಿದ್ದು, ಬುಧವಾರ ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್‌ ಮತ್ತು ಉದ್ಯಮಾಡಳಿತ ಕಾಲೇಜಿನ ಪ್ರಾಂಗಣದಲ್ಲಿ ಚಿತ್ರೀಕರಣ ನಡೆಯಿತು.

ದಕ್ಷಿಣ ಭಾರತದ ಚಿತ್ರದಲ್ಲಿ ಮೊದಲ ಬಾರಿ ಅಭಿನಯಿಸುತ್ತಿರುವ ಜಾನಿ ಲಿವರ್, ಚಿತ್ರೀಕರಣದ ಅನುಭವವನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು. ಅಚ್ಚರಿಯೆಂದರೆ, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದು ತುಳುವಿನಲ್ಲೇ! ತುಳು ಪ್ರಶ್ನೆಗಳಿಗೆಲ್ಲಾ ಸುಲಲಿತವಾಗಿ ತುಳುವಿನಲ್ಲೇ ಉತ್ತರಿಸಿದರು. ‘ಯಾನ್‌ ಆಂಧ್ರಪ್ರದೇಶ­ದಾಯೆ. ಮಾತೃಭಾಷೆ ತೆಲುಗು.

ಯಾನ್‌ ಹಿಂದಿ ಬೊಕ್ಕ ಮರಾಠಿ ಬುಡ್‌ಂಡ ದಕ್ಷಿಣ ಭಾರತದ ಕನ್ನಡ, ಮಲೆಯಾಳ, ತಮಿಳ್‌, ತೆಲುಗು... ಒವ್ವು ಭಾಷೆಡ್‌ಲಾ ಸಿನಿಮಾ ಮಲ್ದ್‌ಜಿ. ಆಂಡ ತುಳು ಭಾಷೆಡ್‌ ಸುರುತ ಸಾರಿ ಬಣ್ಣ ಪಾಡ್‌ದೇ.. ಈ ಚಿತ್ರನ್‌ ನಿಗುಲು ಗೆಂದಾಲೆ (ನಾನು ಆಂಧ್ರಪ್ರದೇಶದವ. ಮಾತೃಭಾಷೆ ತೆಲುಗು, ಹಿಂದಿ, ಮರಾಠಿ ಬಿಟ್ಟರೆ ದಕ್ಷಿಣ ಭಾರತದ ಕನ್ನಡ, ಮಲಯಾಳ, ತಮಿಳು, ತೆಲುಗು ಯಾವುದೇ ಭಾಷೆಯ ಚಿತ್ರಗಳಲ್ಲೂ ನಾನು ಅಭಿನಯಿಸಿಲ್ಲ. ಈ ಚಿತ್ರವನ್ನು ನೀವು ಗೆಲ್ಲಿಸಿ)’ ಎಂದು ಅವರು  ಮನವಿ ಮಾಡಿದರು.

ಅವರ ಅಸ್ಖಲಿತ ತುಳುವಿನಿಂದ ಅಚ್ಚರಿಗೊಳಗಾದ ಪತ್ರಕರ್ತರು ಮೊದಲು ಕೇಳಿದ್ದೇ, ‘ನೀವು ಇಷ್ಟೊಂದು ಚೆನ್ನಾಗಿ ತುಳು ಮಾತನಾಡಲು ಸಾಧ್ಯವಾಗಿದ್ದು ಹೇಗೆ?’ ಎಂದು.

ಮತ್ತೆ ತುಳುವಿನಲ್ಲೇ ಉತ್ತರಿಸಿದ ಜಾನಿ, ‘ನನ್ನ ತಂದೆ ಉದ್ಯೋಗ ನಿಮಿತ್ತ ಮುಂಬೈನಲ್ಲಿ ನೆಲೆಸಿದ್ದರು.

ನೆರೆಕರೆಯವರೆಲ್ಲಾ ತುಳುವಿನವರೇ ಇದ್ದರು. ಗೆಳೆಯರಿಂದ ತುಳು ಕಲಿತೆ. ನನಗೆ ತುಳುವರೆಂದರೆ ಭಾರಿ ಅಭಿಮಾನ. ರಂಗ್‌ ಚಿತ್ರದಿಂದಾಗಿ ತುಳುವಿನ ರಂಗು ಕೂಡಾ ಬದಲಾಗಲಿದೆ’ ಎಂದರು.

1979ರಲ್ಲಿ ಮಂಗಳೂರಿನ ಪುರಭವನದಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಮೆಲುಕು ಹಾಕಿದರು.
‘ನನ್ನ ತಂದೆ ಹಿಂದುಸ್ತಾನ್‌ ಲಿವರ್‌ ಕಂಪೆನಿಯಲ್ಲಿ ಕೆಲಸಕ್ಕಿದ್ದರು. ಆರು ವರ್ಷ ಆ ಕಂಪೆನಿಯಲ್ಲಿದ್ದ ನಾನು ಅಲ್ಲೊಂದು ಮಿಮಿಕ್ರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ಜನ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಅಂದಿನಿಂದ ಇಂದಿನವರೆಗೂ ಲಿವರ್‌ ಹೆಸರು ನನ್ನ ಜತೆಯಲ್ಲೇ ಉಳಿದಿದೆ’ ಎಂದು ಹೆಸರಿನ ಗುಟ್ಟು ಬಿಟ್ಟುಕೊಟ್ಟರು.

‘ಈಗ ಆಯ್ದ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದೇನೆ. ಸಂತ ಬಂತ, ಅಕ್ಷಯ್‌ ಕುಮಾರ್‌ ನಾಯಕರಾಗಿರುವ ಇನ್ನೊಂದು ಚಿತ್ರ ಸಹಿತ ಒಟ್ಟು ಮೂರು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಚಿತ್ರಕಥೆ ಚೆನ್ನಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಸುಮಾರು 400 ಚಿತ್ರಗಳಲ್ಲಿ ನಟಿಸಿದ್ದರೂ ‘ಬಾಜಿಗರ್‌’ ನನ್ನ ನೆಚ್ಚಿನ ಚಿತ್ರ’ ಎಂದರು.

‘ನನ್ನನ್ನು ನೊಡಿದಾಗಲೇ ಜನ ನಗುತ್ತಾರೆ. ನಾನು ಶೋಕಾಚರಣೆ ಸಮಾರಂಭಕ್ಕೆ ಹೋದರೂ ಜನ ನನ್ನನ್ನು ನೋಡಿ ನಗುವುದುಂಟು. ಹಾಗಾಗಿ ನಾನು ಕಾಮಿಡಿ ಪಾತ್ರಗಳಲ್ಲಿ ಮಾತ್ರ ನಟಿಸುತ್ತೇನೆ. ಇದರಲ್ಲಿ ತೃಪ್ತಿ ಇದೆ. ನಿರ್ದೇಶಕನಾಗುವ ಕನಸು ನನಗಿಲ್ಲ. ಅವಕಾಶ ಸಿಕ್ಕರೆ ಮತ್ತೆ ತುಳು ಚಿತ್ರದಲ್ಲಿ ನಟಿಸುತ್ತೇನೆ’ ಎಂದರು.

‘ನನ್ನ ಮಗಳೂ ಕೂಡಾ ಹಿಂದಿ ಚಿತ್ರವೊಂದರಲ್ಲಿ ನಟಿಸುತ್ತಿದ್ದಾಳೆ. ಆಕೆ ಸ್ವಂತ ಪ್ರತಿಭೆಯಿಂದ ಮೇಲೆ ಬರಬೇಕೆಂಬ ಹಂಬಲ ನನ್ನದು. ಚಿತ್ರಕ್ಕೆ ಆಯ್ಕೆ ಮಾಡುವ ಮುನ್ನ ನಿರ್ದೇಶಕರಿಗೆ ಆಕೆ ನನ್ನ ಮಗಳೆಂದು ತಿಳಿದಿರಲಿಲ್ಲ’ ಎಂದರು.

ರಂಗ್‌ ಚಿತ್ರಕ್ಕೆ ಖ್ಯಾತ ಸಿನಿಮಾಟೋಗ್ರಾಫರ್‌ ಸಂದೀಪ್‌ ಭಟ್ಟಾಚಾರ್ಯ ಅವರ ಛಾಯಾಗ್ರಹಣವಿದೆ. ಚಿತ್ರದ ನಾಯಕ ಅರ್ಜುನ್‌ ಕಾಪಿಕಾಡ್‌, ನಾಯಕಿ  ದೀಕ್ಷಿತಾ ಆಚಾರ್ಯ, ನಿರ್ದೇಶಕರಾದ ವಿಸ್ಮಯ ವಿನಾಯಕ ಹಾಗೂ ಸುಹಾನ್‌ ಪ್ರಸಾದ್‌, ನಿರ್ಮಾಪಕರಾದ ದೇವ್‌ದಾಸ್‌, ಪ್ರಮೀಳಾ ದೇವ್‌ದಾಸ್‌, ಸುಖಪಾಲ್‌ ಪೊಳಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.