ADVERTISEMENT

11500 ಜನರಿಂದ 43 ಕಿ.ಮೀ. ಕಡಲ ತೀರ ಸ್ವಚ್ಛತೆಗೆ ಶ್ರಮ

​ಪ್ರಜಾವಾಣಿ ವಾರ್ತೆ
Published 2 ಮೇ 2011, 10:55 IST
Last Updated 2 ಮೇ 2011, 10:55 IST

ಮಂಗಳೂರು: ಶ್ರಮ ವಹಿಸುವ ದುಡಿಯುವ ಕಾರ್ಮಿಕರ ದಿನವಾದ ಇಂದು ಶ್ರಮದಾನ ಮಾಡುವ ಮೂಲಕ ಕಡಲ ತೀರವನ್ನು ಸ್ವಚ್ಛಗೊಳಿಸುವಂತಹ ಸಮಾಜಸೇವಾ ಕಾರ್ಯದಲ್ಲಿ ಸಾವಿರಾರು ಜನರು ತೊಡಗಿರುವುದು ಪ್ರಶಂಸಾರ್ಹ ಕಾರ್ಯ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾ ನಗರ ಪಾಲಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಜಂಟಿಯಾಗಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲೆಯ 43 ಕಿ.ಮೀ. ವ್ಯಾಪ್ತಿಯ ಕಡಲ ತೀರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಡಲ ತೀರದ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಮಂಗಳೂರು ಮತ್ತು ವಿವಿಧ ಗ್ರಾಮಗಳ, ಸಂಘ-ಸಂಸ್ಥೆಗಳ 11500ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಆ ಮೂಲಕ `ಸ್ವಚ್ಛ-ಸುಂದರ ಕರಾವಳಿ ಕಡಲ ತೀರ~ ಕಾಯ್ದುಕೊಳ್ಳುವ ಕಾರ್ಯದಲ್ಲಿ ಶ್ರಮದಾನ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳನ್ನು ಕಸಮುಕ್ತಗೊಳಿಸಿ ಶುಚಿಯಾಗಿಡಬೇಕೆಂಬ ಜಿಲ್ಲಾಡಳಿತದ ಉದ್ದೇಶಕ್ಕೆ ವ್ಯಕ್ತವಾದ ಸಾರ್ವಜನಿಕ ಸ್ಪಂದನೆ ಬಹಳ ಖುಷಿ ನೀಡಿದೆ. ಜಿಲ್ಲಾಡಳಿತದ ಉದ್ದೇಶ ಈಡೇರಿದಂತಾಗಿದೆ ಎಂದು ಜಿಲ್ಲಾಧಿಕಾರಿ ಸುಬೋಧ್‌ ಯಾದವ್‌ ಹರ್ಷ ವ್ಯಕ್ತಪಡಿಸಿದರು.

ತೋಟಬೆಂಗ್ರೆಯಲ್ಲಿ ಬೀಚ್‌ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಶ್ರಮದಾನದಲ್ಲಿ ಸಾಂಕೇತಿವಾಗಿ ಭಾಗವಹಿಸಿದ್ದ ಪರಿಸರ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್‌, ಪ್ಲಾಸ್ಟಿಕ್‌ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಯತ್ನಿಸಲಾಗುತ್ತಿದೆ ಎಂದರು.

ಬೀಚ್‌ ಸ್ವಚ್ಛತೆಯಲ್ಲಿ 7,500 ಸ್ವಯಂಸೇವಕರು ಪಾಲ್ಗೊಂಡಿದ್ದಾರೆ. 4000 ಜನರು ಬಂಟ್ವಾಳ, ಪುತ್ತೂರು, ಮೂಡುಬಿದರೆ, ಬೆಳ್ತಂಗಡಿ, ಸುಳ್ಯದಲ್ಲಿ ನಡೆದ ಶ್ರಮದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಸುಬೋಧ್‌ ಯಾದವ್‌ ತಿಳಿಸಿದರು.

ಬಂಟ್ವಾಳದಲ್ಲಿ 500, ಪುತ್ತೂರು ನಗರದಲ್ಲಿ 1800, ಮೂಡುಬಿದರೆಯಲ್ಲಿ 600, ಬೆಳ್ತಂಗಡಿಯಲ್ಲಿ 400, ಸುಳ್ಯದಲ್ಲಿ 400 ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಮಾಹಿತಿ ನೀಡಿದರು. ತೋಟಬೆಂಗ್ರೆಯಲ್ಲಿ 3,500, ವಲಯ ಒಂದರಲ್ಲಿ 1500, ಪಣಂಬೂರು ಸಸಿತ್ಲುನಲ್ಲಿ 1500, ವಲಯ 4ರಲ್ಲಿ  700, ವಲಯ 5ರಲ್ಲಿ 700, ಜನರು ಕಡಲತೀರ ಶುಚಿತ್ವದಲ್ಲಿ ಪಾಲ್ಗೊಂಡಿದ್ದರು. ಒಟ್ಟು 23 ಲಾರಿ-ಟೆಂಪೊ ಟ್ರ್ಯಾಕ್ಸ್‌, 407 ವಾಹನಗಳಲ್ಲಿ ಒಟ್ಟು 65 ಲೋಡ್‌ ಕಸ ಸಂಗ್ರಹಿಸಿ ಸೂಕ್ತ ರೀತಿ ವಿಲೇವಾರಿ ಮಾಡಲಾಗಿದೆ ಎಂದರು.

ವಿಧಾನಸಭೆ ಉಪ ಸಭಾಧ್ಯಕ್ಷ  ಯೋಗೀಶ್‌ ಭಟ್‌ ಮಾತನಾಡಿದರು. ಮೇಯರ್‌ ಪ್ರವೀಣ್‌ ಕುಮಾರ್‌, ನ್ಯಾಯಾಧೀಶರಾದ ಎಚ್‌.ಆರ್‌.ದೇಶಪಾಂಡೆ, ಅಬ್ದುಲ್‌ ನಝೀರ್‌, ಬಿ.ಎನ್‌.ಪಿಂಟೋ, ಪೊಲೀಸ್‌ ಕಮಿಷನರ್‌ ಸೀಮಾಂತ್‌ ಕುಮಾರ್‌ ಸಿಂಗ್‌, ಪಾಲಿಕೆ ಆಯುಕ್ತ ಕೆ.ಎಎನ್‌.ವಿಜಯಪ್ರಕಾಶ್‌, ಪ್ರದೀಪ್‌ ಕುಮಾರ್‌ ಕಲ್ಕೂರ, ಎಂಆರ್‌ಪಿಎಲ್‌ನ ಲಕ್ಷ್ಮಿ ಕುಮರನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.