ADVERTISEMENT

ಮಂಗಳೂರು: ಪಿಎಫ್ಐ ನಿಷೇಧದ ಬೆನ್ನಲ್ಲೇ 12 ಕಡೆ ಕಚೇರಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 21:09 IST
Last Updated 28 ಸೆಪ್ಟೆಂಬರ್ 2022, 21:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್ಐ) ಸೇರಿದಂತೆ ಎಂಟು ಸಂಘಟನೆಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 10 ಕಡೆ ಪಿಎಫ್‌ಐ ಕಚೇರಿಗಳಿಗೆ ಹಾಗೂ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ (ಸಿಎಫ್ಐ) ಒಂದು ಕಚೇರಿಗೆ ಹಾಗೂ ಮಾಹಿತಿ ಮತ್ತು ಸಬಲೀಕರಣ ಕಚೇರಿಗೆ ಪೊಲೀಸರು ಬುಧವಾರ ಬೀಗ ಹಾಕಿದರು.

ಪಣಂಬೂರು ಠಾಣೆ ವ್ಯಾಪ್ತಿಯ ಕಸಬಾ ಬೆಂಗ್ರೆ, ಸುರತ್ಕಲ್‌ ಠಾಣೆ ವ್ಯಾಪ್ತಿಯ ಚೊಕ್ಕಬೆಟ್ಟು ಮತ್ತು ಕಾಟಿಪಳ್ಳ ಎರಡನೇ ಬ್ಲಾಕ್‌, ಬಜಪೆ ಠಾಣೆ ವ್ಯಾಪ್ತಿಯ ಅಡ್ಡೂರು ಮತ್ತು ಕಿನ್ನಿಪದವು, ಉಳ್ಳಾಲ ಠಾಣೆ ವ್ಯಾಪ್ತಿಯ ತಲಪಾಡಿ ಬಳಿಯ ಕೆ.ಸಿ.ರೋಡ್‌, ಕೊಣಾಜೆ ಠಾಣೆ ವ್ಯಾಪ್ತಿಯ ಇನೋಳಿ, ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಲ್ಲೂರು, ಮಂಗಳೂರು ದಕ್ಷಿಣ ಠಾಣೆ ವ್ಯಾಪ್ತಿಯ ನೆಲ್ಲಿಕಾಯಿ ರಸ್ತೆ, ಮಂಗಳೂರು ಉತ್ತರ ಠಾಣೆ ವ್ಯಾಪ್ತಿಯ ಕುದ್ರೋಳಿ ಕರ್ಬಾಲ ರಸ್ತೆ ಬಳಿ ಇರುವ ಪಿಎಫ್‌ಐ ಕಚೇರಿಗಳಲ್ಲಿ ಪೊಲೀಸರು ಶೋಧ ನಡೆಸಿ, ಅವುಗಳಿಗೆ ಬೀಗ ಹಾಕಿದ್ದಾರೆ. ಕಚೇರಿಗಳಲ್ಲಿ ಶೋಧ ನಡೆಸಿದ ಪೊಲೀಸರು, ಅಲ್ಲಿದ್ದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ಮಂಗಳೂರು ಉತ್ತರ ಠಾಣೆ ವ್ಯಾಪ್ತಿಯಲ್ಲಿ ಅಜಾಜುದ್ದೀನ್‌ ರಸ್ತೆ ಬಳಿ ಇರುವ ಸಿಎಫ್‌ಐ ಕಚೇರಿ ಹಾಗೂ ಮಂಗಳೂರು ದಕ್ಷಿಣ ಠಾಣೆ ವ್ಯಾಪ್ತಿಯ ರಾವ್‌ ಆ್ಯಂಡ್‌ ರಾವ್ ವೃತ್ತದ ಬಳಿ ಇರುವ ಮಾಹಿತಿ ಮತ್ತು ಸಬಲೀಕರಣ ಕಚೇರಿಗಳಲ್ಲೂ ಪೊಲೀಸರು ಶೋಧ ನಡೆಸಿದ್ದು, ಅವುಗಳಿಗೂ ಬೀಗ ಹಾಕಿದ್ದಾರೆ.

ADVERTISEMENT

ಸ್ಟೇಟ್‌ಬ್ಯಾಂಕ್ ಸಮೀಪದ ನೆಲ್ಲಿಕಾಯಿ ರಸ್ತೆಯ ಬಳಿಯ ಹಾಗೂ ಬಂದರಿನ ಅಜೀಜುದ್ದೀನ್ ರಸ್ತೆಯ ಬಳಿಯ ಸಿಎಫ್‌ಐ ಕಚೇರಿಗೆ ನಗರ ಪೊಲೀಸ್ ಕಮಿಷನರ್‌ ಎನ್.ಶಶಿಕುಮಾರ್ ನೇತೃತ್ವ ಸಂಜೆ ವೇಳೆ ಬೀಗ ಮುದ್ರೆ ಹಾಕಿಲಾಯಿತು. ಈ ವೇಳೆ ಬಿಗು ಬಂದೋಬಸ್ತ್ ಏರ್ಪಾಟು ಮಾಡಲಾಗಿತ್ತು. ಇದಕ್ಕೂ ಮುನ್ನ ನೆಲ್ಲಿಕಾಯಿ ರಸ್ತೆ ಮತ್ತು ಅಜೀಜುದ್ದೀನ್ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಯಿತು.

ಪೊಲೀಸರು ನಗರದ ನೆಲ್ಲಿಕಾಯಿ ರಸ್ತೆ ಬಳಿಯ ಪಿಎಫ್‌ಐ ಕಚೇರಿಗೆ ತೆಳಿದಾಗ ಅಲ್ಲಿ ಯಾರೂ ಇರಲಿಲ್ಲ. ಅಲ್ಲಿನ ಗೇಟಿಗೂ ಬೀಗ ಹಾಕಲಾಗಿತ್ತು. ಪೊಲೀಸರುಬೀಗ ಮುರಿದು ಒಳಪ್ರವೇಶಿಸಿದರು. ಕಚೇರಿಯ ಒಳಗಿದ್ದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಬಳಿಕ ಕಚೇರಿ ಬಾಗಿಲಿಗೆ ಬೀಗಮುದ್ರೆ ಹಾಕಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಸೆ. 22ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿತ್ತು. ‘ಪಿಎಫ್‌ಐ ಮಂಗಳೂರು ಜಿಲ್ಲಾ ಘಟಕ’ದ ಅಧ್ಯಕ್ಷ ಬಂಟ್ವಾಳ ಇಜಾಜ್‌ ಅಹಮದ್‌ ಹಾಗೂ ‘ಪುತ್ತೂರು ಜಿಲ್ಲಾ ಘಟಕ’ದ ಅಧ್ಯಕ್ಷ ಜಾಬೀರ್ ಅರಿಯಡ್ಕ ಸೇರಿದಂತೆ ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದ 14 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ (ಸೆ.27ರಂದು ) ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.