ADVERTISEMENT

ಮಕ್ಕಳಿಗಾಗಿ 13 ಕ್ವಾರಂಟೈನ್‌ ಕೇಂದ್ರ

ಮೂರನೇ ಅಲೆಗೆ ಸಿದ್ಧತೆ: ರಕ್ಷಣೆಗೆ ಒಳಗಾದ ಮಕ್ಕಳಿಗೆ ವ್ಯವಸ್ಥೆ

ಸಂಧ್ಯಾ ಹೆಗಡೆ
Published 2 ಜುಲೈ 2021, 4:14 IST
Last Updated 2 ಜುಲೈ 2021, 4:14 IST
ಮೂಲ್ಕಿಯಲ್ಲಿರುವ ಮಕ್ಕಳ ಕ್ವಾರಂಟೈನ್ ಕೇಂದ್ರದ ಹೊರ ಆವರಣ
ಮೂಲ್ಕಿಯಲ್ಲಿರುವ ಮಕ್ಕಳ ಕ್ವಾರಂಟೈನ್ ಕೇಂದ್ರದ ಹೊರ ಆವರಣ   

ಮಂಗಳೂರು: ಸಂಭಾವ್ಯ ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಾಗುವ ಮಕ್ಕಳ ಸುರಕ್ಷತೆಗಾಗಿ ಜಿಲ್ಲೆಯಲ್ಲಿ 13 ಕ್ವಾರಂಟೈನ್‌ ಕೇಂದ್ರ ಪ್ರಾರಂಭಿಸಲು ಜಿಲ್ಲಾಡಳಿತ ಸಿದ್ಧತೆ ನಡೆದಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ವಿವಿಧ ರೀತಿಯ ಸಮಸ್ಯೆ ಎದುರಿಸುತ್ತಿರುವ 18 ವರ್ಷದ ಒಳಗಿನ ಮಕ್ಕಳಿಗೆ ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ರಕ್ಷಣೆ ಮತ್ತು ಪುನರ್ವಸತಿ ಒದಗಿಸುತ್ತದೆ. ಹೀಗೆ ಬರುವ ಮಕ್ಕಳು ಪಾಲನಾ ಸಂಸ್ಥೆಯ ಆರೈಕೆಯಲ್ಲಿ ಇರುತ್ತಾರೆ. ಇಲ್ಲಿಗೆ ಬರುವ ಮಕ್ಕಳನ್ನು ನೇರವಾಗಿ ಪಾಲನಾ ಸಂಸ್ಥೆಗೆ ಸೇರಿಸುವ ಬದಲಾಗಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ವಾರಂಟೈನ್ ಕೇಂದ್ರ ರೂಪಿಸಿ, ಅಲ್ಲಿ ಅವರನ್ನು ಕ್ವಾರಂಟೈನ್ ಮಾಡಿ ರಕ್ಷಣೆ ಒದಗಿಸಲು ಜಿಲ್ಲಾ ರಕ್ಷಣಾ ಘಟಕ ಮುಂದಾಗಿದೆ.

ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಆರು ಮಕ್ಕಳ ಪಾಲನಾ ಸಂಸ್ಥೆಗಳು, ಎರಡು ವಸತಿ ನಿಲಯಗಳು, ಒಂದು ವಸತಿ ಗೃಹ, ಒಂದು ಖಾಸಗಿ ಟ್ರಸ್ಟ್‌ಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಗುರುತಿಸಲಾಗಿದೆ. ಈಗಾಗಲೇ ಸುರತ್ಕಲ್‌ನ ಆಶಾಕಿರಣ ಬಾಲಕರ ಪಾಲನಾ ಕೇಂದ್ರ ಹಾಗೂ ಮೂಲ್ಕಿಯ ಬಾಲಕಿಯರ ಪಾಲನಾ ಕೇಂದ್ರಗಳಲ್ಲಿ ಕ್ವಾರಂಟೈನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ADVERTISEMENT

ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿ ಒಟ್ಟು 74 ರಕ್ಷಣಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಪ್ರಸ್ತುತ 24 ಕೇಂದ್ರಗಳಲ್ಲಿ 364 ಮಕ್ಕಳು ರಕ್ಷಣೆಯಲ್ಲಿದ್ದಾರೆ. ಅವರ ಸುರಕ್ಷತೆಗೆ ಆಯಾ ಕೇಂದ್ರಗಳಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಈ ಮಕ್ಕಳಲ್ಲಿ ಯಾರಿಗಾದರೂ ಕೋವಿಡ್ ದೃಢಪಟ್ಟಲ್ಲಿ ಅವರಿಗೆ ಅದೇ ಸ್ಥಳದಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹೊಸದಾಗಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಮುನ್ನೆಚ್ಚರಿಕೆಯಾಗಿ ಈ ಕ್ವಾರಂಟೈನ್ ಕೇಂದ್ರಗಳಲ್ಲಿ ಮೂರು ವಾರ ವಸತಿ ಕಲ್ಪಿಸಿ, ಪಾಲನಾ ಕೇಂದ್ರಕ್ಕೆ ಸೇರಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ನಗರದ ಸರ್ಕಾರಿ ಬಾಲಕರ ಬಾಲಮಂದಿರದ ಅಧಿಕಾರಿಗಳಿಗೆ ನೂತನವಾಗಿ ನಿರ್ಮಿಸಿರುವ ವಸತಿಗೃಹ, ಶಕ್ತಿನಗರದ ಸಾನ್ನಿಧ್ಯ ವಸತಿಯುತ ಶಾಲೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಅಶೋಕ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಕಂಕನಾಡಿ ಈಶ್ವರಾನಂದ ಬಾಲಿಕಾಶ್ರಮ, ಮಂಜನಾಡಿಯ ಅಲ್‌–ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್, ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್‌ (ಮುಸ್ಲಿಂ ಸಮುದಾಯದ ಮಕ್ಕಳಿಗೆ), ತಾಲ್ಲೂಕಿನ ಅಳಿಕೆಯ ಬಾಪೂಜಿ ಬಾಲನಿಕೇತನ ನಿರ್ಗತಿಕ ಕುಟೀರ, ಪುತ್ತೂರು ನೆಲ್ಲಿಕಟ್ಟೆಯ ವಾತ್ಸಲ್ಯಧಾಮ ದತ್ತು ಕೇಂದ್ರ ಹಾಗೂ ಖಾಸಗಿ ಸಂಸ್ಥೆಯಾಗಿರುವ ಬೋಳಾರದ ಶಾಂತಿ ಸಂದೇಶ ಟ್ರಸ್ಟ್‌ನಲ್ಲಿ ಕ್ವಾರಂಟೈನ್ ಕೇಂದ್ರಗಳು ರೂಪುಗೊಂಡಿವೆ.

‘ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ’

‘ಕೋವಿಡ್ ಲಾಕ್‌ಡೌನ್ ನಂತರ ಎರಡು ತಿಂಗಳುಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಆನ್‌ಲೈನ್ ತರಗತಿಯ ಕಾರಣಕ್ಕೆ ಮಕ್ಕಳ ಕೈಗೆ ಮೊಬೈಲ್‌ ಸೇರಿ ಅದರ ದುರ್ಬಳಕೆಯಿಂದ ಅನೇಕ ಅಹಿತಕರ ಸಂದರ್ಭಗಳು ಸೃಷ್ಟಿಯಾಗಿವೆ. ಮಕ್ಕಳ ರಕ್ಷಣಾ ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿದೆ’ ಎನ್ನುತ್ತಾರೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ.

ವೆನ್ಲಾಕ್‌ನಲ್ಲಿ ಪ್ರತ್ಯೇಕ ವಿಭಾಗ

ಕೋವಿಡ್ ಪಾಸಿಟಿವ್ ಆದ ಮಕ್ಕಳಿಗೆ ಚಿಕಿತ್ಸೆ ನೀಡಲು ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಎನ್‌ಆರ್‌ಸಿ ಮಕ್ಕಳ ವಿಭಾಗದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.