ADVERTISEMENT

ಮಂಗಳೂರಿನಲ್ಲಿ ಮತ್ತೆ 167 ಜನರಲ್ಲಿ ಸೋಂಕು ದೃಢ

2 ನೇ ದಿನವೂ ಕೋವಿಡ್–19 ಸ್ಫೋಟ: 2 ಸಾವಿರದತ್ತ ನಾಗಾಲೋಟ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:54 IST
Last Updated 9 ಜುಲೈ 2020, 16:54 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕೋವಿಡ್–19 ಸೋಂಕಿತರ ಸಂಖ್ಯೆ ಮೂರಂಕಿ ದಾಟಿದ್ದು, ಗುರುವಾರ ಒಂದೇ ದಿನ 167 ಜನರಲ್ಲಿ ಸೋಂಕು ದೃಢವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,709ಕ್ಕೆ ಏರಿದ್ದು, 2 ಸಾವಿರದತ್ತ ಸಾಗಿದೆ.

ಜುಲೈ 3 ರಂದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದ್ದು, 1,020ಕ್ಕೆ ಏರಿತ್ತು. ಇದೀಗ ಆರು ದಿನದಲ್ಲಿ 689 ಹೊಸ ಪ್ರಕರಣಗಳು ವರದಿಯಾಗಿವೆ. ಇದೇ 5 ರಂದು 147, 8 ರಂದು 183 ಹಾಗೂ 9 ರಂದು 167 ಮಂದಿಗೆ ಸೋಂಕು ತಗಲಿದೆ.

ಗುರುವಾರ ಕೋವಿಡ್–19 ದೃಢಪಟ್ಟವರ ಪೈಕಿ, 1 ವರ್ಷದ ಮಗು ಸೇರಿದಂತೆ 8 ಮಕ್ಕಳು ಹಾಗೂ 15 ಮಂದಿ ವೃದ್ಧರು ಸೇರಿದ್ದಾರೆ. 1 ಮತ್ತು 3 ವರ್ಷದ ಬಾಲಕರಿಗೆ ಕೋವಿಡ್–19 ದೃಢವಾಗಿದ್ದು, ಇವರ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. ಇನ್ನು 14 ವರ್ಷದ ಬಾಲಕನಲ್ಲಿ ಐಎಲ್‌ಐನಿಂದಾಗಿ ಕೋವಿಡ್–19 ದೃಢವಾಗಿದೆ. 3, 11, 13, 15, 17 ವರ್ಷದ ಮಕ್ಕಳಿಗೂ ಸೋಂಕು ತಗಲಿದೆ.

ADVERTISEMENT

ಕೋವಿಡ್–19 ದೃಢವಾಗಿರುವ ವೃದ್ಧರ ಪೈಕಿ ಹೆಚ್ಚಿನವರಿಗೆ ಐಎಲ್‌ಐನಿಂದಲೇ ಸೋಂಕು ತಗಲಿದೆ. 78, 68, 65, 64 ವರ್ಷದ ವೃದ್ಧರು ಹಾಗೂ 60 ವರ್ಷದ ಇಬ್ಬರು ವೃದ್ಧರಿಗೆ ಐಎಲ್‌ಐನಿಂದ ಕೋವಿಡ್–19 ತಗಲಿದೆ. 80, 69, 62 ಹಾಗೂ 60 ವರ್ಷದ ವೃದ್ಧರ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. 74, 70, 68 ವರ್ಷದ ವೃದ್ಧರಲ್ಲಿ ಕೋವಿಡ್ ದೃಢವಾಗಿದ್ದು, 67 ಮತ್ತು 60 ವರ್ಷದ ವೃದ್ಧರಿಗೆ ಎಸ್‌ಎಆರ್‌ಐನಿಂದ ಸೋಂಕು ತಗಲಿದೆ.

ಸಂಪರ್ಕ, ಐಎಲ್‌ಐದಿಂದಲೇ ಹೆಚ್ಚು: 167 ಜನರ ಪೈಕಿ, 64 ಜನರಿಗೆ ಪ್ರಾಥಮಿಕ ಸಂಪರ್ಕದಿಂದ, 42 ಜನರಿಗೆ ಐಎಲ್‌ಐನಿಂದ ಸೋಂಕು ದೃಢವಾಗಿದೆ. ಸಂಪರ್ಕವೇ ಪತ್ತೆಯಾಗದ 38 ಪ್ರಕರಣಗಳು ವರದಿಯಾಗಿವೆ.

7 ಮಂದಿ ಗುಣಮುಖ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಏಳು ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆ 1,709 ಪ್ರಕರಣಗಳು ದೃಢವಾಗಿದ್ದು, 702 ಮಂದಿ ಗುಣಮುಖರಾಗಿದ್ದಾರೆ. 977 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಈ ಪೈಕಿ ಏಳು ಜನರಿಗೆ ವೆನ್ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತೊಂದು ಸಾವು

ಕೋವಿಡ್–19 ನಿಮದ 49 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 30ಕ್ಕೆ ಏರಿದೆ.

ಇದೇ 7 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬೋಳೂರಿನ ಈ ವ್ಯಕ್ತಿ ನ್ಯುಮೋನಿಯಾ, ಯಕೃತ್ತಿನ ರೋಗದಿಂದ ಬಳಲುತ್ತಿದ್ದರು. ಇವರಿಗೆ ವೆನ್ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಕೋವಿಡ್‌–19 ನಿಂದ ಮೃತಪಟ್ಟ 30 ಮಂದಿಯ ಪೈಕಿ ಇಬ್ಬರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 25 ಜನರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದರೆ, 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.

ಖಾದರ್ ಗನ್‌ಮ್ಯಾನ್‌ಗೂ ಕೋವಿಡ್‌

ಶಾಸಕ ಯು. ಟಿ. ಖಾದರ್ ಅವರ ಗನ್‌ಮ್ಯಾನ್‌ಗೂ ಕೋವಿಡ್–19 ಸೋಂಕು ದೃಢವಾಗಿದೆ.

ಈ ಕುರಿತು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಯು.ಟಿ. ಖಾದರ್‌, ‘ನನ್ನ ಗನ್‌ಮ್ಯಾನ್‌ಗೂ ಸೋಂಕು ತಗಲಿದೆ. ಅನಾರೋಗ್ಯದಿಂದಾಗಿ 10 ದಿನಗಳ ಹಿಂದೆಯೇ ಅವರು ರಜೆಯ ಮೇಲೆ ತೆರಳಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.