ಬ್ರಹ್ಮಾವರ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 18 ಗ್ರಾಮ ಪಂಚಾಯಿತಿಗಳ ಪೈಕಿ, 14 ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ಕಾರ್ಯಕ್ಕೆ ಶಾಸಕ ಕೆ.ರಘುಪತಿ ಮಂಗಳವಾರ ಚಾಲನೆ ನೀಡಿದರು.
ಹಂದಾಡಿ ಗ್ರಾಮ ಪಂಚಾಯಿತಿಯ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಒಟ್ಟು 4 ಟ್ಯಾಂಕರ್ ಮೂಲಕ ವೈಯಕ್ತಿಕ ನೆಲೆಯಲ್ಲಿ ನೀರು ಸರಬರಾಜು ಮಾಡಲಾಗುತ್ತದೆ. ಉತ್ತಮ ಗುಣಮಟ್ಟದ ಕುಡಿಯುವ ನೀರನ್ನೇ ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗ್ರಾಮಾಂತರ ಪ್ರದೇಶದ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಭಿವೃದ್ಧಿ ಅಧಿಕಾರಿಗಳು ಮೂರು ದಿನದೊಳಗೆ ಪಂಚಾಯಿತಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ನಿರ್ಣಯ ಕೈಗೊಂಡು ತಿಳಿಸಬೇಕು. ನೀರು ಪೂರೈಕೆಗೆ ಉಪಯೋಗಿಸಲಾಗುವ ಟ್ಯಾಂಕರ್ ಇನ್ನಿತರ ಸಾರಿಗೆ ವ್ಯವಸ್ಥೆಗೆ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಈ ಹಣವನ್ನು ಜಿಲ್ಲಾಧಿಕಾರಿ ಪ್ರತೀ ಗ್ರಾಮ ಪಂಚಾಯಿತಿಗಳಿಗೆ ಒದಗಿಸಲಿದ್ದಾರೆ ಎಂದು ತಿಳಿಸಿದರು.
ಸದ್ಯ ವಾರಂಬಳ್ಳಿ, ಕೆಮ್ಮಣ್ಣು ಸೇರಿದಂತೆ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಸಮಸ್ಯೆ ಇರುವ ಪಂಚಾಯಿತಿಗೆ ವಾರಕ್ಕೆ ಮೂರು ದಿನ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತದೆ. ಇನ್ನೂ ಅವಶ್ಯಕತೆ ಇದ್ದಲ್ಲಿ ಸ್ಥಳೀಯ ಪಂಚಾಯಿತಿ ಸದಸ್ಯರ ಗಮನಕ್ಕೆ ತರಬಹುದು ಅಥವಾ ಬ್ರಹ್ಮಾವರ ಶಾಸಕರ ಕಚೇರಿಗೆ 2505500 ದೂರವಾಣಿ ಮೂಲಕ ಹೇಳಬಹುದು ಎಂದರು.
ಮೂರು ದಿನದ ನಂತರ ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ಅದಕ್ಕೆ ನೇರವಾಗಿ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಯನ್ನಾಗಿ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.
ಮಲ್ಟಿ ವಿಲೇಜ್ ಸ್ಕೀಮ್ ನೆನೆಗುದಿಗೆ? ಕಳೆದ ಎರಡು ವರ್ಷಗಳ ಹಿಂದೆ ಜಾರಿಗೆ ಬರಬೇಕಾಗಿದ್ದ ಮಲ್ಟಿ ವಿಲೇಜ್ ಸ್ಕೀಂ ಕೆಲವೊಂದು ತಾಂತ್ರಿಕ ಕಾರಣಗಳಿಂದ ಇನ್ನೂ ಪ್ರಾರಂಭವಾಗಿಲ್ಲ. ಉಪ್ಪೂರು ಮತ್ತು ನೀಲಾವರದಲ್ಲಿ ಆರಂಭಗೊಳ್ಳಬೇಕಿರುವ ಈ ಕಾಮಗಾರಿಯಿಂದ 10ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಆದಷ್ಟು ಬೇಗ ಈ ಕಾಮಗಾರಿಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮಟಪಾಡಿಗೆ ನೀರು: ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಜಿ, ಬೆಣ್ಣೆಕುದ್ರು ಇನ್ನಿತರ ಪ್ರದೇಶಗಳಲ್ಲಿ ಇರುವ ನೀರಿನ ಸಮಸ್ಯೆ ಬಗ್ಗೆ ಕಳೆದ ವಾರ ಪ್ರತಿಭಟನೆ ನಡೆಸಲಾಗಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಈಗಾಗಲೇ ಹೊಸ ಬಾವಿ ರಚನೆಗೆ ಚಾಲನೆ ನೀಡಲಾಗಿದೆ. ಈ ಪ್ರದೇಶಗಳಿಗೂ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತದೆ ಎಂದು ರಘುಪತಿ ಭಟ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಡಿ.ವಿ.ಹೆಗ್ಡೆ, ಹಂದಾಡಿ, ಕುಂಜಾಲು, ಚೇರ್ಕಾಡಿ, ಕರ್ಜೆ, ಚಾಂತಾರು ಮತ್ತಿತರರ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.