ADVERTISEMENT

ತಲಪಾಡಿ |ಪಕ್ಷದ ವಿರುದ್ಧ ಮತಚಲಾವಣೆ: ಬಿಜೆಪಿ ಬೆಂಬಲಿತ ಸದಸ್ಯರಿಬ್ಬರ ಉಚ್ಚಾಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 10:40 IST
Last Updated 12 ಆಗಸ್ಟ್ 2023, 10:40 IST
   

ಉಳ್ಳಾಲ: ‘ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಿದ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಹಾಗೂ ಮುಂದಿನ ಆರು ವರ್ಷಗಳ ಕಾಲ ಪಕ್ಷಕ್ಕೆ ಬರದಂತೆ ನಿರ್ಬಂಧಿಸಲಾಗುವುದು’ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್‌ ಹೇಳಿದರು.

ಅವರು ಪಂಡಿತ್‌ಹೌಸ್‌ನ ಚುನಾ ವಣಾ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ತಲಪಾಡಿ ಗ್ರಾಮ ಪಂಚಾಯಿತಿಯ ಒಟ್ಟು ಸಂಖ್ಯಾಬಲ 24 ಇದ್ದು, 13 ಬಿಜೆಪಿ ಬೆಂಬಲಿತರು, 10 ಮಂದಿ ಎಸ್‌ಡಿಪಿಐ ಬೆಂಬಲಿತರು ಹಾಗೂ ಒಬ್ಬರು ಕಾಂಗ್ರೆಸ್‌ ಬೆಂಬಲಿತರು ಇದ್ದಾರೆ. ಪಕ್ಷದ ತೀರ್ಮಾನದಂತೆ ಸತ್ಯರಾಜ್‌ ಅವರನ್ನು ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿತ್ತು. ಎಸ್‌ಡಿಪಿಐನ ಆಮಿಷಗಳಿಗೆ ಬಲಿಯಾಗಿ ಹಾಗೂ ಒತ್ತಡದಿಂದ ಮಹಮ್ಮದ್‌ ಫಯಾಜ್‌ ಮತ್ತು ಮಹಮ್ಮದ್‌ ಎಂಬ ಬಿಜೆಪಿ ಬೆಂಬಲಿತ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಅಡ್ಡಮತದಾನ ಮಾಡಿ ಎಸ್‌ಡಿಪಿಐ ಗೆಲುವಿಗೆ ಕಾರಣರಾಗಿದ್ದಾರೆ’ ಎಂದರು.

ADVERTISEMENT

‘ಈ ಬಗ್ಗೆ ಪಕ್ಷ ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಮೊಹಮ್ಮದ್‌ ತಪ್ಪನ್ನು ಕೇಳಿಕೊಂಡಿದ್ದಾರೆ. ಫಯಾಜ್‌ ಅವರು ಮಾತ್ರ ಶುಕ್ರವಾರ ಚುನಾ ವಣಾ ಕಾರ್ಯಾಲಯದಲ್ಲಿ ಕ್ಷೇತ್ರ ಬಿಜೆಪಿ ಕರೆದಿದ್ದ ಸಭೆಗೆ ಗೈರು ಹಾಜ ರಾಗಿದ್ದರು. ಇದು ಒಳಒಪ್ಪಂದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಯಾವುದೇ ಕಾರಣಕ್ಕೆ ಎಸ್‌ಡಿಪಿಐ ಸಿದ್ಧಾಂತವನ್ನು ಒಪ್ಪುವುದಿಲ್ಲ. ಬೆಂಬಲವನ್ನು ನೀಡು ವುದಿಲ್ಲ, ಬಿಜೆಪಿ ಅಧಿಕಾರದ ಆಸೆಗಾಗಿ ಇರುವ ಪಕ್ಷವೇ ಅಲ್ಲ. ಸಾರ್ವಜನಿಕವಾಗಿ ತಪ್ಪು ಸಂದೇಶ ಹೋಗಿದೆ. ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಹಿಂದುಳಿದ ವರ್ಗ ‘ಬಿ’ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿ ಒಬ್ಬರೇ ಇದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷದ ಬೆಂಬಲದಿಂದ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ’ ಎಂದು ಹೇಳಿದರು.

ಇಬ್ಬರು ಸದಸ್ಯರು ಪಕ್ಷ ದ್ರೋಹ ಮತ್ತು ಅನ್ಯಾಯ ಮಾಡಿದ್ದರಿಂದ ಪಕ್ಷದ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂತೋಷ್‌ ರೈ ಬೋಳಿಯಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಕಾರ್ಯದರ್ಶಿಗಳಾದ ರಣದೀಪ್‌ ಕಾಂಚನ್‌, ಸತೀಶ್‌ ಕುಂಪಲ, ಜಯಶ್ರೀ ಕರ್ಕೇರ, ಹೇಮಂತ್‌ ಶೆಟ್ಟಿ, ನವೀನ್‌ ಪಾದಲ್ಪಾಡಿ, ತಲಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ತಲಪಾಡಿ ಬಿಜೆಪಿ ಘಟಕದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಉಪಸ್ಥಿತರಿದ್ದರು.

ಚೀಟಿಯಲ್ಲಿತ್ತು ಅದೃಷ್ಟ: ತಲಪಾಡಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು ಬೆಂಬಲ ನೀಡಿದ್ದರಿಂದ ಹಾಗೂ ‘ಚೀಟಿ ಎತ್ತಿದಾಗ ಅದೃಷ್ಟ ಖುಲಾಯಿಸಿದ್ದರಿಂದ’ ಎಸ್‌ಡಿಪಿಐ ಬೆಂಬಲಿತ ಟಿ.ಇಸ್ಮಾಯಿಲ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದ್ದರು.

ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಎಸ್‌ಡಿಪಿಐ ಬೆಂಬಲಿತ ಟಿ.ಇಸ್ಮಾಯಿಲ್‌ ಹಾಗೂ ಬಿಜೆಪಿ ಬೆಂಬಲಿತ ಸತ್ಯರಾಜ್‌ ಸ್ಪರ್ಧಿಸಿದ್ದರು.

ಕಾಂಗ್ರೆಸ್‌ ಬೆಂಬಲಿತ ವೈಭವ್ ವೈ. ಶೆಟ್ಟಿ ಮತ್ತು ಎಸ್‌ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರಾಗಿದ್ದರು.

ಟಿ.ಇಸ್ಮಾಯಿಲ್‌ ಮತ್ತು ಸತ್ಯರಾಜ್‌ ಇಬ್ಬರೂ ತಲಾ 11 ಮತಗಳನ್ನು ಪಡೆದಿದ್ದರು. ಚುನಾವಣಾಧಿಕಾರಿ ಆದೇಶದಂತೆ ಚೀಟಿ ಎತ್ತುವ ಪ್ರಕ್ರಿಯೆ ನಡೆಸಲಾಯಿತು. ಚೀಟಿ ಎತ್ತಿದಾಗ ಟಿ.ಇಸ್ಮಾಯಿಲ್‌ ಗೆಲುವು ಸಾಧಿಸಿದರು.

ಚುನಾವಣಾಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.