ADVERTISEMENT

ಸಸಿಹಿತ್ಲು: ಇಬ್ಬರು ಸಮುದ್ರಪಾಲು

ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಗೆ ಬಂದಿದ್ದ ಯುವಕರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:02 IST
Last Updated 7 ಜುಲೈ 2019, 19:02 IST
ಮೂಲ್ಕಿ ಬಳಿಯ ಸಸಿಹಿತ್ಲುವಿನಲ್ಲಿ ಭಾನುವಾರ ಇಬ್ಬರು ಸಮುದ್ರ ಪಾಲಾಗಿದ್ದು, ಸ್ಥಳದಲ್ಲಿ ಸೇರಿರುವ ಜನಸ್ತೋಮ
ಮೂಲ್ಕಿ ಬಳಿಯ ಸಸಿಹಿತ್ಲುವಿನಲ್ಲಿ ಭಾನುವಾರ ಇಬ್ಬರು ಸಮುದ್ರ ಪಾಲಾಗಿದ್ದು, ಸ್ಥಳದಲ್ಲಿ ಸೇರಿರುವ ಜನಸ್ತೋಮ   

ಮೂಲ್ಕಿ: ಸಸಿಹಿತ್ಲುವಿನಲ್ಲಿ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ ಇಬ್ಬರು ಯುವಕರು ಭಾನುವಾರ ಸಮುದ್ರ ಪಾಲಾಗಿದ್ದಾರೆ.

ಏಳು ಮಂದಿಯ ತಂಡದಲ್ಲಿದ್ದ ನಾಲ್ಕು ಮಂದಿ ಯುವಕರು ಸಮುದ್ರಕ್ಕೆ ಇಳಿದಿದ್ದು, ಸಮುದ್ರದ ಅಲೆಗೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ಅಲೆಗೆ ಸಿಲುಕಿ ನಾಪತ್ತೆಯಾಗಿದ್ದಾರೆ.

ಬಜ್ಪೆಯ ಸಿದ್ಧಾರ್ಥ ನಗರದ ಸುಜಿತ್ (32), ಕಾವೂರು ನಿವಾಸಿ ಗುರುಪ್ರಸಾದ್ (28) ಸಮುದ್ರದಲ್ಲಿ ನಾಪತ್ತೆಯಾದವರು. ಬಜ್ಪೆಯ ಸೃಜನ್ ಹಾಗೂ ಕಾರ್ತಿಕ್‌ ಎಂಬುವರನ್ನು ಸ್ಥಳೀಯ ಗಂಗಾಧರ ಪುತ್ರನ್ ಹಾಗೂ ತಂಡ ಸದಸ್ಯರು ರಕ್ಷಿಸಿದ್ದಾರೆ. ಇವರಲ್ಲಿ ಸೃಜನ್ ತೀವ್ರ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಬಜ್ಪೆ ಯುವ ಟೈಗರ್ ತಂಡದ ಸ್ಪರ್ಧಾಳುಗಳಾದ ಇವರು ಸ್ಪರ್ಧೆಯ ಮೊದಲನೇ ಸುತ್ತಿನಲ್ಲಿಯೇ ಸೋತಿದ್ದರಿಂದ ನಾಲ್ಕು ಮಂದಿ ಸಸಿಹಿತ್ಲಿನ ಅಗ್ಗಿದಕಳಿಯ ಎಂಬಲ್ಲಿಗೆ ಬಂದು ಸಮುದ್ರದಲ್ಲಿ ಈಜಾಡಲು ಪ್ರಾರಂಭಿಸಿದ್ದರು. ಸ್ಥಳೀಯರು ಎಚ್ಚರಿಸಿದರೂ ಇವರು ನಿರ್ಲಕ್ಷಿಸಿದ್ದರು.

ಸಮುದ್ರ ತೀರದಿಂದ 1 ಕಿ.ಮೀ ದೂರದ ಬಾಕಿಮಾರು ಗದ್ದೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸಂಯೋಜಕರು ಆಗಾಗ ಧ್ವನಿ ವರ್ಧಕದಲ್ಲಿ ಸಮುದ್ರದತ್ತ ಹೋಗಬೇಡಿ ಎಂದು ಎಚ್ಚರಿಸುತ್ತಿದ್ದರು. ಸ್ಥಳೀಯ ಮೀನುಗಾರ ಮಹಿಳೆಯರು ಕೂಡ ಈ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದರು. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.