ADVERTISEMENT

ವಿಜಯ ಬ್ಯಾಂಕಿನ 2.1 ಕೋಟಿ ಗ್ರಾಹಕರಿಗೆ ಸೇವೆ

ಬ್ಯಾಂಕ್‌ ಆಫ್‌ ಬರೋಡದಿಂದ ತಂತ್ರಜ್ಞಾನ ಸಮನ್ವಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:45 IST
Last Updated 20 ಅಕ್ಟೋಬರ್ 2020, 2:45 IST

ಮಂಗಳೂರು: ಹಿಂದಿನ ವಿಜಯ ಬ್ಯಾಂಕ್ ಶಾಖೆಗಳು ಮತ್ತು ಬ್ಯಾಂಕ್ ಆಫ್ ಬರೋಡ ಶಾಖೆಗಳ ತಂತ್ರಜ್ಞಾನ ಸಮನ್ವಯವನ್ನು ಬಿಒಬಿ ಹಾಗೂ ಎಕ್ಸೆಂಚರ್ ಯಶಸ್ವಿಯಾಗಿ ಪೂರ್ಣಗೊಳಿಸಿವೆ.

ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಜತೆ 2019ರಲ್ಲಿ ವಿಲೀನವಾದಾಗ ದೇಶದ ಮೂರನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೃಷ್ಟಿಯಾಗಿತ್ತು. ಇದು ಪೂರ್ಣಗೊಂಡ ಬಳಿಕ, ಕ್ರೋಡೀಕೃತ ತಂತ್ರಜ್ಞಾನ ಕಂಪನಿಯಾಗಿ ಎಕ್ಸೆಂಚರ್ ಕಾರ್ಯ ನಿರ್ವಹಿಸುವ ಮೂಲಕ ದೇಶವ್ಯಾಪಿ ಗ್ರಾಹಕ ಸೇವೆಗಳನ್ನು ಮತ್ತು ಸುಮಾರು 9ಸಾವಿರ ಬ್ಯಾಂಕ್ ಶಾಖೆಗಳು ಹಾಗೂ 12ಸಾವಿರಕ್ಕೂ ಅಧಿಕ ಎಟಿಎಂ ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸುವಲ್ಲಿ ನೆರವಾಗಿತ್ತು.

ಎಕ್ಸೆಂಚರ್ ಕಾರ್ಯಯೋಜನೆಯಂತೆ ವಿಜಯ ಬ್ಯಾಂಕಿನ 1,900 ಕ್ಕೂ ಅಧಿಕ ಶಾಖೆಗಳ ಸುಮಾರು 2.1 ಕೋಟಿ ಗ್ರಾಹಕರು ಇದೀಗ ಸುಲಲಿತವಾಗಿ ಬ್ಯಾಂಕ್ ಆಫ್ ಬರೋಡಗೆ ವಲಸೆ ಬಂದಂತಾಗಿದೆ. ಈ ವಲಸೆ ಪ್ರಕ್ರಿಯೆಯನ್ನು ದೂರಸಂವೇದಿ ವಿಧಾನದ ಮೂಲಕ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಪೂರ್ಣಗೊಳಿಸಲಾಗಿದ್ದು, ವಹಿವಾಟು ನಿರಂತರತೆ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ಬ್ಯಾಂಕ್‌ ಆಫ್‌ ಬರೋಡದ ಮುಖ್ಯ ತಂತ್ರಜ್ಞಾನ ಅಧಿಕಾರಿ ಶರದ್ ಸಕ್ಸೇನಾ ಹೇಳಿದ್ದಾರೆ.

ADVERTISEMENT

2018ರಲ್ಲಿ ಬ್ಯಾಂಕ್ ಆಫ್ ಬರೋಡ, ಎಕ್ಸೆಂಚರ್ ಜತೆ ಸಹಭಾಗಿತ್ವ ಮಾಡಿಕೊಂಡು, ಅನಾಲಿಸ್ಟಿಕ್ಸ್ ಸೆಂಟರ್ ಫಾರ್ ಎಕ್ಸಲೆನ್ಸ್ (ಎಸಿಒಇ) ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಕಾರ್ಯಕ್ಕೆ ಮುಂದಾಗಿತ್ತು. ಇದು ಕೇಂದ್ರೀಯ ಡಾಟಾ ಡೆಪಾಸಿಟರಿಯನ್ನು ಒಳಗೊಂಡ ಸಾಫ್ಟ್‌ವೇರ್ ಪ್ಲಾಟ್‌ಫಾರಂ ಆಗಿದ್ದು, ಇದು ಕಂಪನಿಯ ಒಂದು ಪೆಟಾಬೈಟ್ (ಹತ್ತು ಲಕ್ಷ ಗಿಗಾಬೈಟ್) ದತ್ತಾಂಶವನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ. ಇದು ಪ್ರಿಡಿಕ್ಟಿವ್ ಅನಾಲಿಸ್ಟಿಕ್ಸ್‌ನಂತಹ ಮುಂಚೂಣಿ ಡಾಟಾ ತಂತ್ರಜ್ಞಾನದಿಂದ ಮತ್ತು ತಂತ್ರಗಳಿಂದ ಚಾಲಿತವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.