ADVERTISEMENT

ಒಂದೇ ದಿನ 238 ಮಂದಿಗೆ ಕೋವಿಡ್

ಜಿಲ್ಲೆಯಲ್ಲಿ ಸೋಂಕಿನಿಂದ ಆರು ಸಾವು: 74 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:41 IST
Last Updated 16 ಜುಲೈ 2020, 17:41 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮತ್ತೊಮ್ಮೆ ಕೋವಿಡ್–19 ಸೋಂಕು ತೀವ್ರವಾಗಿದ್ದು, ಒಂದೇ ದಿನ 238 ಮಂದಿಗೆ ಕೋವಿಡ್‌–19 ಇರುವುದು ದೃಢವಾಗಿದೆ. ಇದುವರೆಗಿನ ಪ್ರಕರಣಗಳಲ್ಲಿ ಗುರುವಾರದ ಸಂಖ್ಯೆ ಗರಿಷ್ಠವಾಗಿದೆ. ಈ ಮಧ್ಯೆ ಮತ್ತೆ 74 ಮಂದಿ ಗುಣಮುಖರಾಗಿದ್ದಾರೆ.

ಸೋಂಕು ಪತ್ತೆಯಾಗಿರುವವರ ಪೈಕಿ 106 ಮಂದಿ ಐಎಲ್‌ಐನಿಂದ ಬಳಲುತ್ತಿದ್ದು, 17 ಮಂದಿ ಎಸ್‌ಎಆರ್‌ಐನಿಂದ ಬಳಲುತ್ತಿದ್ದಾರೆ. ಅಲ್ಲದೇ 73 ಮಂದಿಯ ಸೋಂಕಿನ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. 23 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಕೋವಿಡ್‌–19 ತಗಲಿದ್ದು, ವಿದೇಶದಿಂದ ಬಂದ 19 ಮಂದಿಗೆ ಕೋವಿಡ್ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಆರು ಸಾವು: ಕೋವಿಡ್‌–19 ನಿಂದ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಮೃತಪಟ್ಟ ಆರು ಮಂದಿಗೆ ಕೋವಿಡ್–19 ಸೋಂಕು ಇರುವುದು ಗುರುವಾರ ದೃಢವಾಗಿದೆ.

ADVERTISEMENT

ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದ ಮೂಲ್ಕಿ ತಾಲ್ಲೂಕಿನ 44 ವರ್ಷದ ಪುರುಷ ಇದೇ 14 ರಂದು ಮೃತಪಟ್ಟಿದ್ದಾರೆ. ಮಧುಮೇಹ, ರಕ್ತದಲ್ಲಿ ಪೋಟ್ಯಾಷಿಯಂ ಪ್ರಮಾಣ ಹೆಚ್ಚಾಗಿರುವ ಹೈಪರ್‌ಕಾಲ್ಮಿಯಾದಿಂದ ಬಳಲುತ್ತಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ 68 ವರ್ಷದ ವೃದ್ಧ, ಯಕೃತ್‌ ತೊಂದರೆ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಮಂಗಳೂರು ತಾಲ್ಲೂಕಿನ 62 ವರ್ಷದ ವೃದ್ಧ ಬುಧವಾರ ಮೃತಪಟ್ಟಿದ್ದಾರೆ.

ಮೂತ್ರಪಿಂಡದ ಕಾಯಿಲೆ, ಮಧುಮೇಹ, ಹೃದ್ರೋಗದಿಂದ ಬಳಲುತ್ತಿದ್ದ ಮಂಗಳೂರು ತಾಲ್ಲೂಕಿನ 66 ವರ್ಷದ ವೃದ್ಧ, ತೀವ್ರ ಉಸಿರಾಟದ ತೊಂದರೆ, ಬಹುಅಂಗಾಂಗ ನಿಷ್ಕ್ರಿಯತೆಯಿಂದ ಬಳಲುತ್ತಿದ್ದ 76 ವರ್ಷದ ವೃದ್ಧೆ ಹಾಗೂ ಹೃದ್ರೋಗ, ಮಧುಮೇಹ, ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಬಂಟ್ವಾಳ ತಾಲ್ಲೂಕಿನ 47 ವರ್ಷದ ಮಹಿಳೆ ಗುರುವಾರ ಮೃತಪಟ್ಟಿದ್ದಾರೆ. ಇದೀಗ ಇವರ ಗಂಟಲು ದ್ರವದ ಮಾದರಿ ವರದಿ ಬಂದಿದ್ದು, ಕೋವಿಡ್–19 ಇರುವುದು ದೃಢವಾಗಿದೆ. ಕೋವಿಡ್‌–19 ನಿಂದ ಮೃತಪಟ್ಟವರ ಸಂಖ್ಯೆ 63ಕ್ಕೆ ಏರಿದೆ.

26 ಸಾವಿರ ಮಾದರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 26,111 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 23,348 ಮಂದಿಗೆ ವರದಿ ನೆಗೆಟಿವ್‌ ಬಂದಿದೆ.

ಒಟ್ಟು 2,763 ಮಂದಿಗೆ ಕೋವಿಡ್–19 ದೃಢವಾಗಿದ್ದು, ಗುರುವಾರದ 74 ಮಂದಿ ಸೇರಿದಂತೆ ಇದುವರೆಗೆ 1,163 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಜಿಲ್ಲೆಯಲ್ಲಿ 1,537 ಸಕ್ರಿಯ ಪ್ರಕರಣಗಳಿದ್ದು, ಸರ್ಕಾರಿ ವೆನ್ಲಾಕ್‌ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಸರಗೋಡು: 18 ಮಂದಿಗೆ ಕೋವಿಡ್‌

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೋವಿಡ್–19 ದೃಢಪಟ್ಟಿದೆ. 11 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದ್ದು, ವಿದೇಶದಿಂದ ಬಂದ ನಾಲ್ವರು, ಹೊರ ರಾಜ್ಯಗಳಿಂದ ಬಂದ ಮೂವರಿಗೆ ಕೋವಿಡ್ ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ 23 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.