ಉರ್ವಸ್ಟೋರ್‌ನಲ್ಲಿರುವ ಕರಾವಳಿ ಲೇಖಕಿಯರ ವಾಚಕರ ಸಂಘದ ನವೀಕೃತ ಕಟ್ಟಡವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಉದ್ಘಾಟಿಸಿದರು. ಸಬಿತಾ ಬನ್ನಾಡಿ, ಜ್ಯೋತಿ ಚೇಳ್ಯಾರು, ಇಂದಿರಾ ಹಾಲಂಬಿ, ವೇದವ್ಯಾಸ ಕಾಮತ್, ಶ್ರೀನಾಥ್ ಎಂ.ಪಿ., ಶಕುಂತಳಾ ಶೆಟ್ಟಿ, ಮಮತಾ ಗಟ್ಟಿ ಮತ್ತಿತರರು ಭಾಗವಹಿಸಿದ್ದರು
–ಪ್ರಜಾವಾಣಿ ಚಿತ್ರ
ಮಂಗಳೂರು: ‘ದಕ್ಷಿಣ ಕನ್ನಡದ ಜಿಲ್ಲೆಯ 25 ಅಂಗನವಾಡಿ ಕೇಂದ್ರಗಳಿಗೆ ಈ ವರ್ಷದಲ್ಲಿ ಸ್ವಂತ ಕಟ್ಟಡಗಳನ್ನು ಇಲಾಖೆ ಮಂಜೂರು ಮಾಡಲಿದೆ. ಪ್ರತಿ ಕಟ್ಟಡಕ್ಕೂ ತಲಾ ₹ 20 ಲಕ್ಷ ಅನುದಾನ ಸಿಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ ತಿಳಿಸಿದರು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘವು ಉರ್ವಸ್ಟೋರ್‌ನಲ್ಲಿ ಹೊಂದಿರುವ ಕಚೇರಿಯ ನವೀಕೃತ ಕಟ್ಟಡ 'ಸಾಹಿತ್ಯ ಸದನ' ವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
‘ಈಗಿನ ತಲೆಮಾರಿನ ಹುಡುಗ–ಹುಡುಗಿಯರು ಫೇಸ್‌ಬುಕ್, ವಾಟ್ಸ್ಆ್ಯಪ್‌ನಲ್ಲೇ ಜಾಸ್ತಿ ಬರೆಯುತ್ತಿದ್ದಾರೆ. ನಾವು ಪ್ರಪಂಚ, ಸುಧಾ, ಪ್ರಜಾವಾಣಿ ಯಂತಹ ಪತ್ರಿಕೆ ಓದಿ ಬೆಳೆದವರು. ಆ ಸಾಹಿತ್ಯದಲ್ಲಿ ಸಿಗುವ ನೆಮ್ಮದಿ ಈಗಿನ ಫಾರ್ವರ್ಡ್ ಸಾಹಿತ್ಯದಲ್ಲಿ ಸಿಗದು. ಕನ್ನಡದ ಪ್ರಥಮ ಕಾದಂಬರಿ ಹಾಗೂ ಪ್ರಥಮ ಕತೆ ರಚನೆಯಾಗಿದ್ದು ಕರಾವಳಿಯಲ್ಲಿ. ಈ ಸಂಘದ ಮಾರ್ಗದರ್ಶನದಲ್ಲಿ ಕರಾವಳಿಯ ಲೇಖಕಿಯರು ಸಾಹಿತ್ಯ ರಚನೆಯಲ್ಲಿ ತೊಡಗಿ ನಾಡು ಕಟ್ಟಲು ಇನ್ನಷ್ಟು ಕೊಡುಗೆ ನೀಡುವಂತಾಗಲಿ’ ಎಂದು ಹಾರೈಸಿದರು.
ಲೇಖಕಿಯರ ಜೊತೆ ವಾಚಕಿಯರನ್ನು ಸೇರಿಸಿಕೊಂಡು ಸಂಘವನ್ನು ಮುನ್ನಡೆಸುತ್ತಿರುವುದಕ್ಕೆ ಸಚಿವರು ಮೆಚ್ಚುಗೆ ಸೂಚಿಸಿದರು. ಇಲಾಖೆಯಿಂದ ನೀಡುವ ರಾಜ್ಯ ಪ್ರಶಸ್ತಿಯನ್ನು ಈ ಸಂಘಕ್ಕೆ ಕೊಡಿಸುವುದಾಗಿ ಘೋಷಣೆ ಮಾಡಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ‘ಇಂದಿನ ಡಿಜಿಟಲ್ ಯುಗದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಾಹಿತ್ಯದ ಪಾತ್ರ ದೊಡ್ಡದು. ಡಿಜಿಟಲೀಕರಣಕ್ಕೆ ಹಿಮ್ಮುಖ ಚಲನೆ ಇಲ್ಲ. ಈ ಬದಲಾವಣೆ ಜೊತೆ ಸಾಹಿತ್ಯ ಕ್ಷೇತ್ರವೂ ಹೆಜ್ಜೆ ಹಾಕಬೇಕು. ಯುವ ಸಮೂಹದಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸುವ ಕಾರ್ಯ ಆಗಬೇಕು’ ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್, ‘ಎಂಆರ್‌ಪಿಎಲ್‌ನ ಸಾಮಾಜಿಕ ಹೊಣೆಗಾರಿಕೆ ನಿಧೀಯ ಅನುದಾನದ ನೆರವಿನಿಂದ ನವೀಕರಣಗೊಂಡ ಈ ಕಟ್ಟಡಕ್ಕೆ ಶಾಸಕರ ನಿಧಿಯಿಂದಲೂ ₹ 6 ಲಕ್ಷ ಒದಗಿಸಿದ್ದೇನೆ. ಈ ಕಟ್ಟಡದ ರಸ್ತೆಗೆ ಇಂಟರ್‌ಲಾಕ್ ಹಾಕಿಸುತ್ತೇನೆ’ ಎಂದರು.
ಸಂಘದ ಅಧ್ಯಕ್ಷರಾದ ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು.
ಪಾಲಿಕೆ ಸದಸ್ಯ ಗಣೇಶ್ ಕುಲಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಂ.ಆರ್. ಪಿ.ಎಲ್ ಮಾನವ ಸಂಪನ್ಮೂಲ ಅಧಿಕಾರಿ ಮೀನಾಕ್ಷಿ, ಲೇಖಕಿ ಇಂದಿರಾ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಶ್ರೀನಾಥ್ ಎಂ.ಪಿ. ಮತ್ತಿತರರು ಭಾಗವಹಿಸಿದ್ದರು. ಲೇಖಕಿ ಸಬಿತಾ ಬನ್ನಾಡಿ ಮುನ್ನೋಟಗಳನ್ನು ಹಂಚಿಕೊಂಡರು.
ಸುಧಾರಾಣಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.