ADVERTISEMENT

ತುರ್ತು ನೆರವಿಗಾಗಿ 3 ಸಾವಿರ ‘ಶೌರ್ಯ’ ಸ್ವಯಂಸೇವಕರ ತಂಡ: ಡಿ.ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 19:05 IST
Last Updated 24 ಅಕ್ಟೋಬರ್ 2022, 19:05 IST
ವೀರೇಂದ್ರ ಹೆಗ್ಗಡೆ
ವೀರೇಂದ್ರ ಹೆಗ್ಗಡೆ   

ಉಜಿರೆ (ದಕ್ಷಿಣ ಕನ್ನಡ): ಗ್ರಾಮೀಣ ಪ್ರದೇಶಗಳಲ್ಲಿ ವಿಪತ್ತು ಸಂಭವಿಸಿದಾಗ ತುರ್ತು ನೆರವು ಮತ್ತು ರಕ್ಷಣೆಗಾಗಿ ಮೂರು ಸಾವಿರ ‘ಶೌರ್ಯ’ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಸೋಮವಾರ ನಡೆದ, ತಮ್ಮ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಅವರು ಈ ಯೋಜನೆ ಪ್ರಕಟಿಸಿದರು.

ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸಲು ಈಗಾಗಲೇ ಧರ್ಮಸ್ಥಳ ಸಂಸ್ಥೆಯಿಂದ 6,500 ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಈ ವರ್ಷ ಇನ್ನೂ ಒಂದು ಸಾವಿರ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ADVERTISEMENT

ರಾಜ್ಯದಲ್ಲಿ 365 ಸರ್ಕಾರಿ ಶಾಲೆಗಳಿಗೆ 2700 ಬೆಂಚು-ಡೆಸ್ಕ್‌ಗಳನ್ನು ವಿತರಿಸಲಾಗುವುದು. ಈ ವರ್ಷ 100 ಕೆರೆಗಳ ಹೂಳೆತ್ತಿ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. 40 ಶುದ್ಧಗಂಗಾ ಘಟಕಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಉಜಿರೆಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ₹ 47 ಲಕ್ಷ ನೆರವು ನೀಡಲಾಗುವುದು. ಅನಾಥ ಹಿರಿಯ ನಾಗರಿಕರ ಪಾಲನೆ ಮತ್ತು ಪೋಷಣೆಗಾಗಿ ₹ 5 ಕೋಟಿ ವೆಚ್ಚದಲ್ಲಿ 500 ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೆಗ್ಗಡೆಯವರು ಹೇಳಿದರು.

ಕಳೆದ ವರ್ಷ ₹ 6 ಕೋಟಿ ವೆಚ್ಚದಲ್ಲಿ ಮೂರು ಆಸ್ಪತ್ರೆಗಳಿಗೆ ಮೂರು ಸಿ.ಟಿ. ಸ್ಕ್ಯಾನ್ ಯಂತ್ರಗಳನ್ನು ನೀಡಿದ್ದು, ಈ ವರ್ಷ ಇನ್ನೂ ಮೂರು ಸಿ.ಟಿ. ಸ್ಕ್ಯಾನ್ ಯಂತ್ರಗಳನ್ನು ನೀಡಲಾಗುವುದು.ಮೈಸೂರಿನಲ್ಲಿ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಈ ವರ್ಷ 7,312 ದೇವಸ್ಥಾನಗಳಿಗೆ ₹ 89 ಕೋಟಿ ನೆರವು ನೀಡಲಾಗಿದೆ. ಧಾರವಾಡದಲ್ಲಿ 200 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಶೀಘ್ರವೇ ಪ್ರಾರಂಭಗೊಳ್ಳಲಿದೆ. ಧರ್ಮಸ್ಥಳದಲ್ಲಿ ಕ್ಯೂ ಕಾಂಪ್ಲೆಕ್ಸ್ ಕಾಮಗಾರಿ ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ತಮ್ಮ ರಾಜ್ಯಸಭಾ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಬೀದರ್ ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಲು ಉದ್ದೇಶಿಸಿದ್ದು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.