ADVERTISEMENT

ಮತ್ತೆ 49 ಮಂದಿಗೆ ಕೋವಿಡ್‌–19 ದೃಢ

ದ.ಕ: ನಾಲ್ಕು ದಿನದಲ್ಲಿ ಒಟ್ಟು 160 ಜನರು ಗುಣಮುಖ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 15:27 IST
Last Updated 27 ಜೂನ್ 2020, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 49 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 576ಕ್ಕೆ ಏರಿದೆ. ಈ ಮಧ್ಯೆ ಶನಿವಾರ 38 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆದವರ ಸಂಖ್ಯೆ 416ಕ್ಕೆ ಏರಿದೆ.

ಜಿಲ್ಲೆಯಲ್ಲಿ ಶನಿವಾರ ದೃಢವಾಗಿರುವ 49 ಪ್ರಕರಣಗಳಲ್ಲಿ 14 ಮಂದಿ ಸೌದಿ ಅರೇಬಿಯಾ, ದಮಾಮ್‌, ದುಬೈ, ಶಾರ್ಜಾ, ಕತಾರ್‌ನಿಂದ ಬಂದವರಾಗಿದ್ದಾರೆ. ಇನ್ನು 22 ಮಂದಿಗೆ ಕೋವಿಡ್‌–19 ದೃಢವಾಗಿರುವ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. 6 ಪ್ರಕರಣಗಳ ಸಂಪರ್ಕದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. 3 ಐಎಲ್‌ಐ ಪ್ರಕರಣಗಳಾಗಿದ್ದರೆ, 4 ಎಸ್‌ಎಆರ್‌ಐ ಪ್ರಕರಣಗಳಾಗಿವೆ. ಸೋಂಕಿತರ ಪೈಕಿ 8 ಮಕ್ಕಳಿದ್ದು, ಐವರು ವೃದ್ಧರಿದ್ದಾರೆ.

38 ಮಂದಿ ಬಿಡುಗಡೆ: ಭಾನುವಾರ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 86 ಮಂದಿ ಗುಣಮುಖರಾಗಿದ್ದಾರೆ. ಇವರ ಗಂಟಲು ದ್ರವದ ಮಾದರಿಯ ವರದಿ ನೆಗೆಟಿವ್‌ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ADVERTISEMENT

ಮಾರ್ಚ್‌ 22 ರಿಂದ ಇದುವರೆಗೆ ಒಟ್ಟು 12,919 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 12,774 ಮಂದಿಯ ವರದಿ ಜಿಲ್ಲಾಡಳಿತದ ಕೈಸೇರಿದೆ. ಇದರಲ್ಲಿ 12,198 ಮಂದಿಯ ವರದಿ ನೆಗೆಟಿವ್‌ ಬಂದಿದ್ದು, 576 ಪ್ರಕರಣಗಳು ದೃಢವಾಗಿವೆ.

ಸದ್ಯಕ್ಕೆ 150 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ನಾಲ್ವರಿಗೆ ವೆನ್ಲಾಕ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 175 ಮಂದಿಯ ವರದಿಗಾಗಿ ಜಿಲ್ಲಾಡಳಿತ ನಿರೀಕ್ಷೆಯಲ್ಲಿದೆ.

ಉಳ್ಳಾಲ: ಒಂದೇ ಮನೆಯ 12 ಮಂದಿಗೆ ಸೋಂಕು

ಉಳ್ಳಾಲದಲ್ಲಿ ಕೋವಿಡ್‌–19 ಸೋಂಕು ದೃಢಪಟ್ಟಿದ್ದ ಮಹಿಳೆಯ ಮನೆಯ 12 ಜನರಿಗೆ ಸೋಂಕು ತಗಲಿದೆ. ಉಳ್ಳಾಲದ ಮಾಸ್ತಿಕಟ್ಟೆ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಮತ್ತಿಬ್ಬರು ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌ ಖಚಿತವಾಗಿದೆ.

ಕೆಲ ದಿನಗಳ ಹಿಂದೆ ಉಳ್ಳಾಲದ ಮಹಿಳೆ ಕೋವಿಡ್‌–19ನಿಂದ ಮೃತಪಟ್ಟಿದ್ದು, ಈ ಮಹಿಳೆಯ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಇದೀಗ ಮಹಿಳೆಯ ಮನೆಯಲ್ಲಿ ವಾಸವಿದ್ದ ಮನೆಯ 17 ಜನರ ಪೈಕಿ 12 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಮಹಿಳೆಯ ಮನೆಯ ಸಮೀಪದ ಮಹಿಳೆಗೂ ಸೋಂಕು ತಗಲಿತ್ತು.

ಆಸ್ಪತ್ರೆಯ ಅಡುಗೆ ಸಿಬ್ಬಂದಿಗೂ ಸೋಂಕು

ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಗರಸಭಾ ವ್ಯಾಪ್ತಿಯ ಮೂವರಿಗೆ ಹಾಗೂ ಗ್ರಾಮಾಂತರ ಪ್ರದೇಶದ ವೃದ್ಧೆಗೆ ಕೋವಿಡ್‌–19 ದೃಢಪಟ್ಟಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದ ಬಂಟ್ವಾಳ ತಾಲ್ಲೂಕಿನ ಪುಣಚದ ಹಾಗೂ ಅನಾರೋಗ್ಯದಿಂದ ದಾಖಲಾಗಿದ್ದ ಮಾಣಿ ಅನಂತಾಡಿಯ ಮಹಿಳೆಯರಿಗೂ ಸೋಂಕು ಇರುವುದು ಖಚಿತವಾಗಿದೆ.

ಕೂರ್ನಡ್ಕ ನಿವಾಸಿಯಾದ ಮಹಿಳೆ ಹೆರಿಗೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ವರದಿಯ ಪ್ರಕಾರ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಪುತ್ತೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಹಾಗೂ ಸೋಂಕು ದೃಢವಾಗಿರುವವರು ಚಿಕಿತ್ಸೆ ಪಡೆಯುತ್ತಿದ್ದ ಎರಡು ಖಾಸಗಿ ಆಸ್ಪತ್ರೆಗಳನ್ನು ಸ್ಯಾನಿಟೈಸಿಂಗ್ ಮಾಡಲಾಗುವುದು.ಎಲ್ಲಾ ನಾಲ್ಕು ಪ್ರಕರಣಗಳ ಮೂಲ ಶೋಧ ನಡೆಸಲಾಗುತ್ತಿದೆ ಎಂದು ತಾಲ್ಲೂಕು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.