ADVERTISEMENT

ಅ.25ರಿಂದ 1ರಿಂದ 5ನೇ ಕ್ಲಾಸ್ ಆರಂಭ; ಶೇ 50ರ ಸಾಮರ್ಥ್ಯದಲ್ಲಿ ತರಗತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 4:20 IST
Last Updated 19 ಅಕ್ಟೋಬರ್ 2021, 4:20 IST
ಡಾ.ಕೆ.ವಿ. ರಾಜೇಂದ್ರ
ಡಾ.ಕೆ.ವಿ. ರಾಜೇಂದ್ರ   

ಮಂಗಳೂರು: ಕೋವಿಡ್ ನಿಯಮ ಪಾಲನೆಯೊಂದಿಗೆ 1ರಿಂದ 5ನೇ ತರಗತಿಗಳಿಗೆ ಅ.25ರಿಂದ ಭೌತಿಕ ತರಗತಿ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೋಮವಾರ ಆದೇಶ ಹೊರಡಿಸಿದ್ದಾರೆ. ಶಾಲಾ ಮುಖ್ಯಸ್ಥರು, ಭೌತಿಕ ತರಗತಿಗಳಿಗೆ ಮಕ್ಕಳ ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಪ್ರವೇಶದ ಸಮಯದಲ್ಲಿ ಕೋವಿಡ್-19 ರೋಗಲಕ್ಷಣಗಳನ್ನು ಕಡ್ಡಾಯವಾಗಿ ಪರಿಶೀಲಿಸುವ ಜತೆಗೆ, ಶೇ 50ರ ಸಾಮರ್ಥ್ಯಕ್ಕೆ ಅನುಗುಣವಾಗಿ ತರಗತಿಯನ್ನು ನಡೆಸಬೇಕು. ಶಾಲೆ ಪ್ರವೇಶ ಮತ್ತು ನಿರ್ಗಮನದಲ್ಲಿ ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು. ಪ್ರತಿ ದಿನ ಶೇ 1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಬಳಸಿ ತರಗತಿ ಕೊಠಡಿಗಳು ಮತ್ತು ವಿಶ್ರಾಂತಿ ಕೊಠಡಿಗಳನ್ನು ಸೋಂಕುರಹಿತಗೊಳಿಸಬೇಕು. ಎರಡು ಡೋಸ್ ಲಸಿಕೆ ಲಸಿಕೆ ಪಡೆದ ಶಿಕ್ಷಕರು ಮತ್ತು ಸಿಬ್ಬಂದಿಗೆ ಮಾತ್ರ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.50 ವರ್ಷ ಮೇಲಿನ ಶಿಕ್ಷಕರು ಫೇಸ್‌ ಶೀಲ್ಡ್‌ ಅನ್ನು ಹೆಚ್ಚುವರಿಯಾಗಿ ಬಳಸಬೇಕು ಎಂದು ತಿಳಿಸಿದ್ದಾರೆ.

ಈಜುಕೊಳಕ್ಕೆ ಅನುಮತಿ: ಪ್ರತಿ ಬ್ಯಾಚ್‌ನಲ್ಲಿ ಶೇ 50ರ ಸಾಮರ್ಥ್ಯಕ್ಕೆ ಸೀಮಿತಗೊಳಿಸಿ, ಈಜುಕೊಳ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಈಜುಕೊಳ ಪ್ರವೇಶಿಸುವ ಮುನ್ನ ವ್ಯಕ್ತಿಯ ಜ್ವರ, ಉಸಿರಾಟದ ಲಕ್ಷಣಗಳನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ರೋಗ ಲಕ್ಷಣ ರಹಿತರು, ಎರಡು ಡೋಸ್ ಲಸಿಕೆ ಪ್ರಮಾಣಪತ್ರ ಹೊಂದಿರುವವರಿಗೆ ಮಾತ್ರ ಈಜುಕೊಳ ಬಳಸಲು ಅವಕಾಶ ನೀಡಬಹುದು. ಪ್ರತಿ ಬ್ಯಾಚ್‌ನ ನಂತರ ಈಜುಗಾರರು ಬಳಸುವ ವಿಶ್ರಾಂತಿ ಕೊಠಡಿಗಳು, ಕಾಲುದಾರಿಗಳು ಮತ್ತು ಇತರ ಸಾಮಾನ್ಯ ಪ್ರದೇಶಗಳನ್ನು ಸೋಂಕುರಹಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ADVERTISEMENT

‘ಪೋರ್ಟಲ್‌ ಅ‍ಪ್‌ಲೋಡ್‌ ಕಡ್ಡಾಯ’

ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ಕಾರ್ಯಾಚರಣೆಗಳನ್ನು ಸರಳಗೊಳಿಸಲಾಗಿದೆ. ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ ಇತ್ಯಾದಿಗಳನ್ನು ಹೊರತುಪಡಿಸಿ ಎಸ್‌ಪಿಒ–2 ದಿನನಿತ್ಯದ ತಪಾಸಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತ ಸರ್ಕಾರದಿಂದ ಸೂಚಿಸಲಾದ ಆಯ್ದ ದೇಶಗಳಿಂದ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಹೊರತುಪಡಿಸಿ, ಉಳಿದ ಪ್ರಯಾಣಿಕರ ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಪರಿಶೀಲನೆಯನ್ನು ಸ್ಥಗಿತಗೊಳಿಸಲಾಗಿದೆ. ಬದಲಾಗಿ, ಪ್ರಯಾಣಿಕರು ‘ಏರ್‌ ಸುವಿಧಾ’ ಪೋರ್ಟಲ್‌ನಲ್ಲಿ ಆರ್‌ಟಿಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ಈ ಪರೀಕ್ಷಾ ವರದಿಯನ್ನು ಸಂಬಂಧಿತ ಏರ್‌ಲೈನ್ಸ್‌ನವರು ಪ್ರಯಾಣಿಕರ ಬೋರ್ಡಿಂಗ್ ಮುಂಚಿತವಾಗಿ ಪರಿಶೀಲಿಸಬೇಕು ಎಂದು ಡಾ. ರಾಜೇಂದ್ರ ಆದೇಶಿಸಿದ್ದಾರೆ.

ಸ್ವಯಂಚಾಲಿತ ಥರ್ಮಲ್ ಕ್ಯಾಮೆರಾಗಳ ಮೂಲಕ ಪ್ರಯಾಣಿಕರ ಮೇಲ್ವಿಚಾರಣೆಯನ್ನು ನಡೆಸಬೇಕು. ಯುನೈಟೆಡ್ ಕಿಂಗ್‌ಡಮ್‌ನಿಂದ ಬರುವವರಿಗೆ ಕ್ಯಾಲೆಂಟೈನ್ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕ ಸ್ಪಷ್ಟೀಕರಣ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.