ADVERTISEMENT

ಕುರಿಯದಲ್ಲಿ ಕಾರ್ಮಿಕರ ವಸತಿ ಶಾಲೆಗೆ ₹75 ಕೋಟಿ ಬಿಡುಗಡೆ: ಅಶೋಕ್‌ಕುಮಾರ್‌ ರೈ

ಶಾಸಕರ ಗ್ರಾಮ ಭೇಟಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 5:22 IST
Last Updated 14 ಜುಲೈ 2025, 5:22 IST
1ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಬಳ್ಳಮಜಲುನಲ್ಲಿ ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು, ವಲಯ ಕಾಂಗ್ರೆಸ್ ಉಸ್ತುವಾರಿ ಶಿವರಾಮ ಆಳ್ವ ಮತ್ತಿತರರು ಹಾಜರಿದ್ದರು
1ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಬಳ್ಳಮಜಲುನಲ್ಲಿ ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು, ವಲಯ ಕಾಂಗ್ರೆಸ್ ಉಸ್ತುವಾರಿ ಶಿವರಾಮ ಆಳ್ವ ಮತ್ತಿತರರು ಹಾಜರಿದ್ದರು   

ಪುತ್ತೂರು: ತಾಲ್ಲೂಕಿನ ಕುರಿಯ ಗ್ರಾಮದಲ್ಲಿ ಸುಮಾರು 8 ಎಕರೆ ಜಾಗದಲ್ಲಿ ಕಾರ್ಮಿಕರ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಸರ್ಕಾರ₹ 75 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ₹ 40 ಕೋಟಿಯ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ತಾಲ್ಲೂಕಿನ ಕುರಿಯ ಗ್ರಾಮದ ಬಳ್ಳಮಜಲುನಲ್ಲಿ ಭಾನುವಾರ ನಡೆದ ಶಾಸಕರ ಗ್ರಾಮ ಭೇಟಿ ಕಾರ್ಯಕ್ರಮ- ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿ ಸಂಭ್ರಮದ ನಡುವೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಸಮ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿದೆ. ಕುರಿಯ ಗ್ರಾಮಕ್ಕೆ ₹ 2.20 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಕಾಂಗ್ರೆಸ್ ಸರ್ಕಾರದ ಪ್ರತೀ ಯೋಜನೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಯೋಜನೆಯ ಸವಲತ್ತುಗಳನ್ನು ಪಡೆದ ಮಂದಿ ಕಾಂಗ್ರೆಸ್ ಸರ್ಕಾರವನ್ನು ಮರೆಯಬಾರದು ಎಂದು ಮನವಿ ಮಾಡಿಕೊಂಡರು.

ADVERTISEMENT

ಕುರಿಯ ವಲಯ ಕಾಂಗ್ರೆಸ್ ಉಸ್ತುವಾರಿ ಶಿವರಾಮ ಆಳ್ವ ಮಾತನಾಡಿ, ಶಾಸಕ ಅಶೋಕ್ ರೈ ಅವರ ಕಾರ್ಯ ವೈಖರಿಯ ಬಗ್ಗೆ ಜನರಿಂದ ಉತ್ತಮ ಅಭಿಪ್ರಾಯವಿದೆ. ಜಾತಿ,ಮತ,ಪಕ್ಷ ಬೇದವಿಲ್ಲದೆ ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಲವು ಪ್ರಮುಖರು ಶೀಘ್ರವೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಕೋಶಾಧಿಕಾರಿ ಶರೂನ್ ಸಿಕ್ವೇರಾ, ಪಕ್ಷದ ಮುಖಂಡ ಸುರೇಂದ್ರ ರೈ ನೇಸರ, ಗ್ರಾ.ಪಂ.ಸದಸ್ಯರಾದ ರಕ್ಷಿತಾ, ಯಾಕೂಬ್, ಬೂತ್ ಸಮಿತಿ ಅಧ್ಯಕ್ಷರಾದ ಮೋನಪ್ಪ, ದಿನೇಶ್ ಬೊಳಂತಿಮಾರು, ಗೋಪಾಲ ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ಸ್ವಾಗತಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.