ADVERTISEMENT

ಒಂದೇ ದಿನ 84 ಪ್ರಕರಣ ಪತ್ತೆ

ಸಂಪರ್ಕ ಪತ್ತೆಯಾಗದ ಸೋಂಕಿತರ ಹೆಚ್ಚಳ, ಮೂವರ ಸಾವು, 833ಕ್ಕೆ ಏರಿದ ಸೋಂಕಿತ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 17:38 IST
Last Updated 1 ಜುಲೈ 2020, 17:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 84 ಮಂದಿಗೆ ಕೋವಿಡ್‌–19 ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ. ಸಂಪರ್ಕ ಪತ್ತೆಯಾಗದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ.

ಜೂನ್‌ 28ರಂದು ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ 28 ಮಂದಿಯ ಸಂಪರ್ಕ ಪತ್ತೆಯಾಗಿರಲಿಲ್ಲ. ಜೂನ್‌ 29ರಂದು, ಜೂನ್‌ 30ರಂದು ಏಳು ಪ್ರಕರಣಗಳಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಬುಧವಾರ ವರದಿ ಲಭಿಸಿದ ಪ್ರಕರಣಗಳಲ್ಲಿ 11 ಮಂದಿಯ ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ. ಈ ಪೈಕಿ ನಾಲ್ವರು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದ ವೇಳೆ ಗಂಟಲಿನ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ.

ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕು ತಗುಲಿದವರ ಸಂಖ್ಯೆ 833ಕ್ಕೇರಿದೆ. ಈ ಪೈಕಿ 444 ಜನರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 372 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ADVERTISEMENT

ಶಾರ್ಜಾದಿಂದ ಬಂದಿರುವ ಆರು ಮಂದಿ, ಹೊರ ರಾಜ್ಯದಿಂದ ಬಂದಿರುವ ಒಬ್ಬರು, ಶೀತ ಜ್ವರದಿಂದ ಬಳಲುತ್ತಿದ್ದ 28 ಮಂದಿ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 38 ಜನರಲ್ಲಿ ಕೋವಿಡ್‌ ಸೋಂಕು ಇರುವುದು ಬುಧವಾರ ಲಭ್ಯವಾದ ವರದಿಗಳಿಂದ ಖಚಿತವಾಗಿದೆ.

ಪೊಲೀಸರಿಗೆ ಸೋಂಕು:

ನಗರದ ಒಬ್ಬ ಎಸಿಪಿ ಸೇರಿದಂತೆ ಹಲವು ಪೊಲೀಸರಿಗೆ ಕೋವಿಡ್‌ ಸೋಂಕು ತಗುಲಿರುವುದು ಬುಧವಾರ ಖಚಿತವಾಗಿದೆ. ಶಿರಾಡಿ ಘಾಟಿಯ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಮಂಗಳೂರಿನ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಇತ್ತೀಚೆಗೆ ಬಂಧಿಸಿದ್ದ ಇಬ್ಬರು ಆರೋಪಿಗಳಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಠಾಣೆಯನ್ನು ಸೀಲ್‌ಡೌನ್‌ ಮಾಡಿದ್ದು, ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅಪ್ರಾಪ್ತೆಯನ್ನು ಮದುವೆಯಾಗಿದ್ದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸರು ಬಂಧಿಸಿದ್ದ ಆರೋಪಿಯಲ್ಲೂ ಸೋಂಕು ಪತ್ತೆಯಾಗಿದೆ. ಠಾಣೆಯ ನಾಲ್ವರು ಪೊಲೀಸರು ಮತ್ತು ಗೃಹ ರಕ್ಷಕದಳದ ಒಬ್ಬ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಪುತ್ತೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಅಡುಗೆ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢಪಟಟ್ಟಿದೆ. ಮಂಗಳೂರಿನ ಲೇಡಿ ಗೋಷನ್‌ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿರುವ ಬೆಳ್ತಂಗಡಿ ತಾಲ್ಲೂಕಿನ ಕೊಯ್ಯೂರು ಗ್ರಾಮದ ಯುವತಿಗೂ ಸೋಂಕು ತಗುಲಿದೆ.

ಒಬ್ಬ ಗುಣಮುಖ; ಇಬ್ಬರು ವಾರ್ಡ್‌ಗೆ: ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 71 ವರ್ಷದ ಪುರುಷ (ಪಿ–9733) ಗುಣಮುಖರಾಗಿದ್ದು, ಅವರನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಮಧುಮೇಹ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ 49 ವರ್ಷದ ಪುರುಷ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ 39 ವರ್ಷದ ಪುರುಷ ರೋಗಿಗಳಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಬ್ಬರೂ ಚೇತರಿಸಿಕೊಂಡಿದ್ದು, ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಒಬ್ಬರ ಸ್ಥಿತಿ ಗಂಭೀರ:

ಯಕೃತ್ತಿನ ಸಮಸ್ಯೆ, ಮಧುಮೇಹ, ಹೃದ್ರೋಗ, ನ್ಯುಮೋನಿಯಾದಿಂದ ಬಳಲುತ್ತಿರುವ 57 ವರ್ಷ ವಯಸ್ಸಿನ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಕಿನ್‌ಸನ್‌ ಕಾಯಿಲೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿರುವ 78 ವರ್ಷದ ಪುರುಷ ಮತ್ತು ಮಧುಮೇಹ ಹಾಗೂ ಹೃದ್ರೋಗದಿಂದ ಬಳಲುತ್ತಿರುವ 52 ವರ್ಷದ ಮಹಿಳೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್‌ನಿಂದ ಮೂವರು ಸಾವು

ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ಮೂವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದ ಆಗಿರುವ ಸಾವುಗಳ ಸಂಖ್ಯೆ 17ಕ್ಕೇರಿದೆ.

ಅಧಿಕ ರಕ್ತದೊತ್ತಡ, ಮಧುಮೇಹ, ನ್ಯುಮೋನಿಯಾ, ಮೆದುಳಿನ ಉರಿಯೂತ ಮತ್ತು ಮಲೇರಿಯಾದಿಂದ ಬಳಲುತ್ತಿದ್ದ ಮಂಗಳೂರಿನ 72 ವರ್ಷ ವಯಸ್ಸಿನ ವೃದ್ಧರೊಬ್ಬರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಕೋವಿಡ್‌ ಸೋಂಕು ಪತ್ತೆಯಾದ ಕಾರಣದಿಂದ ಮಂಗಳವಾರ ರಾತ್ರಿ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕೆಲವೇ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ.

ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ ಭಟ್ಕಳದ 31 ವರ್ಷ ವಯಸ್ಸಿನ ಯುವಕನನ್ನು ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದು, ಬಳಿಕ ಗಂಟಲಿನ ದ್ರವದ ಪರೀಕ್ಷೆ ನಡೆಸಲಾಗಿದೆ. ಕೋವಿಡ್‌ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

76 ವರ್ಷದ ಸೋಂಕಿತರೊಬ್ಬರು ಮಧುಮೇಹ, ಅಧಿಕ ರಕ್ತದೊತ್ತಡ, ಶ್ವಾಸಕೋಶದ ಸಮಸ್ಯೆ ಹಾಗೂ ನ್ಯುಮೋನಿಯಾ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದು, ಮರಣಾ ನಂತರ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಏಳು ದಿನದ ಮಗುವಿಗೂ ಸೋಂಕು

ಬುಧವಾರ ಸೋಂಕು ಪತ್ತೆಯಾದವರಲ್ಲಿ ಏಳು ದಿನಗಳ ಗಂಡು ಶಿಶು ಕೂಡ ಸೇರಿದೆ. ಮಗುವಿನ ತಾಯಿಯಲ್ಲೂ ಸೋಂಕು ಪತ್ತೆಯಾಗಿತ್ತು. ಹೆರಿಗೆಯ ಬಳಿಕ ಮಗುವನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಈಗ ಸೋಂಕು ಪತ್ತೆಯಾಗಿದೆ.

ಈ ಹಿಂದೆ ಹತ್ತು ತಿಂಗಳ ಮಗುವಿನಲ್ಲಿ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆಯ ಬಳಿಕ ಗುಣಮುಖವಾಗಿ, ಮನೆಗೆ ಮರಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.