ADVERTISEMENT

981 ಮತಗಟ್ಟೆ– 3,000 ಪೊಲೀಸರು

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಚುನಾವಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 10 ಮೇ 2018, 9:52 IST
Last Updated 10 ಮೇ 2018, 9:52 IST
ಎಸ್‌ಪಿ ಡಾ.ಬಿ.ಆರ್.ರವಿಕಾಂತೇಗೌಡ
ಎಸ್‌ಪಿ ಡಾ.ಬಿ.ಆರ್.ರವಿಕಾಂತೇಗೌಡ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿರುವ 981 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಭದ್ರತೆ ಒದಗಿಸಲು ಪೊಲೀಸ್‌, ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಪಡೆ, ಸಶಸ್ತ್ರ ಮೀಸಲು ಪೊಲೀಸರು ಸೇರಿದಂತೆ 3,000 ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಡಾ.ಬಿ.ಆರ್‌.ರವಿಕಾಂತೇಗೌಡ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ಕ್ಷೇತ್ರದ ಎಲ್ಲ ಮತಗಟ್ಟೆಗಳು ಹಾಗೂ ಮಂಗಳೂರು ಕ್ಷೇತ್ರದ 31 ಮತಗಟ್ಟೆಗಳು ಸೇರಿವೆ. ಈ ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತ ಮತ್ತು ಮುಕ್ತ ಮತದಾನಕ್ಕೆ ಅಗತ್ಯವಿರುವ ಬಂದೋಬಸ್ತ್‌ ಯೋಜನೆಯನ್ನು ಸಿದ್ಧಪಡಿಸಿದ್ದೇವೆ’ ಎಂದರು.

ಆರು ಡಿವೈಎಸ್‌ಪಿಗಳು, 14 ಇನ್‌ಸ್ಪೆಕ್ಟರ್, 40 ಸಬ್‌ ಇನ್‌ಸ್ಪೆಕ್ಟರ್‌, 136 ಎಎಸ್‌ಐ, 210 ಹೆಡ್‌ ಕಾನ್‌ಸ್ಟೆಬಲ್‌, 660 ಕಾನ್‌ಸ್ಟೆಬಲ್‌, ಗೃಹರಕ್ಷಕ ದಳದ 330 ಸಿಬ್ಬಂದಿ, 20 ಅರಣ್ಯ ರಕ್ಷಕರು, ಅರೆಸೇನಾ ಪಡೆಯ 1,400 ಸಿಬ್ಬಂದಿ, ಒಂದು ಕ್ಷಿಪ್ರ ಕಾರ್ಯಪಡೆ ತಂಡ, ರಾಜ್ಯ ಮೀಸಲು ಪೊಲೀಸ್‌ ಪಡೆಯ ಮೂರು ತುಕಡಿ ಸೇರಿದಂತೆ 3,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಂಚಾರಿ ಭದ್ರತಾ ತಂಡಗಳನ್ನೂ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಅರೆಸೇನಾ ಪಡೆ ಭದ್ರತೆ: ಬೆಳ್ತಂಗಡಿ ತಾಲ್ಲೂಕಿನ ನಕ್ಸಲ್‌ ಪೀಡಿತ ಪ್ರದೇಶಕ್ಕೆ ಜಿಲ್ಲಾಧಿಕಾರಿಯವರ ಜೊತೆ ಭೇಟಿ ನೀಡಿ ಮತದಾರರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಪ್ರದೇಶದಲ್ಲಿ 64 ಮತಗಟ್ಟೆಗಳಿದ್ದು, ಅಲ್ಲಿಗೆ ಅರೆಸೇನಾ ಪಡೆ ನಿಯೋಜನೆ ಮಾಡಲಾಗಿದೆ. ನಕ್ಸಲ್‌ ನಿಗ್ರಹ ದಳ ನಿರಂತರವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಧೈರ್ಯದಿಂದ ಬಂದು ಮತ ಚಲಾಯಿಸುವುದಾಗಿ ಮತದಾರರು ಭರವಸೆ ನೀಡಿದ್ದಾರೆ ಎಂದರು.

ಅಂತರರಾಜ್ಯ ಗಡಿಯಲ್ಲಿ ಎಂಟು ಸೇರಿದಂತೆ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 24 ತನಿಖಾ ಠಾಣೆಗಳನ್ನು ಸ್ಥಾಪಿಸಲಾಗಿದೆ. ಅಂತರರಾಜ್ಯ ತನಿಖಾ ಠಾಣೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಉಳಿದ ಕಡೆಗಳಿಗೆ ವಿಡಿಯೊ ಕ್ಯಾಮೆರಾ ಒದಗಿಸಲಾಗಿದೆ ಎಂದು ಹೇಳಿದರು.

9,937 ಪರವಾನಗಿ ಪಡೆದ ಬಂದೂಕುಗಳ ಪೈಕಿ 9,980 ಬಂದೂಕು ವಾರಸುದಾರರು ಜಿಲ್ಲಾಡಳಿತದ ವಶಕ್ಕೆ ನೀಡಿದ್ದಾರೆ. ಅರಣ್ಯದ ಅಂಚಿನಲ್ಲಿರುವ 57 ಮಂದಿಗೆ ಬಂದೂಕು ಇರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

ಇಬ್ಬರ ಗಡಿಪಾರು: ಜಿಲ್ಲೆಯಲ್ಲಿ ರೌಡಿಗಳ ಮೇಲೆ ನಿಗಾ ಇರಿಸಿದ್ದು, 916 ಮಂದಿಯಿಂದ ಭದ್ರತಾ ಬಾಂಡ್ ಪಡೆಯಲಾಗಿದೆ. ಕಲ್ಲಡ್ಕದ ರತ್ನಾಕರ ಶೆಟ್ಟಿ ಮತ್ತು ಖಲೀಲ್‌ ಎಂಬ ರೌಡಿಗಳನ್ನು ಮೂರು ತಿಂಗಳವರೆಗೆ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
**
ಮೊಕದ್ದಮೆ ದಾಖಲು

ವಿಟ್ಲದಲ್ಲಿ ಪ್ರಚೋದನಕಾರಿ ಬರಹವುಳ್ಳ ಸ್ಟಿಕ್ಕರ್ ಅನ್ನು ಮನೆಗೆ ಅಂಟಿಸಿಕೊಂಡಿದ್ದ ಜಗದೀಶ್ ಎಂಬಾತನ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.