ADVERTISEMENT

ಬಿಜೆಪಿ ಮುಖಂಡನಿಂದ ಮಹಿಳಾ ಅಧಿಕಾರಿಗೆ ನಿಂದನೆ ಆರೋಪ: ದೂರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 14:41 IST
Last Updated 8 ಜೂನ್ 2021, 14:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಡಿಪು: ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ಅಸ್ಗರ್ ಮುಡಿಪು ವಿರುದ್ಧ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಳಿಕ ಯುವ ವಕೀಲನಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಮುಡಿಪು ಸಮೀಪದ ಇಸ್ಫೊಸಿಸ್ ಬಳಿ ಪೈಪ್‌ಲೈನ್ ಹಾಕುವ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಮುಡಿಪು ಸಾಂಬಾರ್ ತೋಟ ನಿವಾಸಿ ವಕೀಲ ಅಸ್ಗರ್ ಅವರು ರಸ್ತೆಯ ಒಂದೇ ಬದಿಯಲ್ಲಿ ಎಲ್ಲಾ ರೀತಿಯ ಪೈಪ್‍ಲೈನ್ ಹಾಕುತ್ತಿರುವುದರಿಂದ ಸಾಂಬಾರುತೋಟ ನಿವಾಸಿಗಳಿಗೆ ತೊಂದರೆಯಾಗುತ್ತದೆ. ರಸ್ತೆ ಇದ್ದರೂ ಫುಟ್‍ಪಾತ್ ಚರಂಡಿಯನ್ನು ನಿರ್ಮಿಸದೆ ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ನೀರು ನುಗ್ಗಿ ನಷ್ಟ ಸಂಭವಿಸುತ್ತಿದೆ. ಈ ಕೂಡಲೇ ಪೈಪ್‍ಲೈನ್ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್‌ ಶೋಭಾಲಕ್ಷ್ಮೀ ಅವರನ್ನು ಒತ್ತಾಯಿಸಿದ್ದರು.

ಕಾಮಗಾರಿ ನಡೆಸುತ್ತಿರುವ ಶೋಭಾಲಕ್ಷ್ಮೀ ‘ಇದು ತಮ್ಮ ವ್ಯಾಪ್ತಿಗೆ ಬರುವ ಕಾಮಗಾರಿಯಲ್ಲ’, ಎಂದು ಹೇಳುತ್ತಿದ್ದಂತೆ ರೊಚ್ಚಿಗೆದ್ದ ವಕೀಲ ಅಸ್ಗರ್, ‘ಲಂಚ ಪಡೆದು ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿ ನಡೆಸುತ್ತಿದ್ದೀರಾ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದೀರಿ. ನೀವು ಅಧಿಕಾರಿಯಾಗಿರಲು ನಾಲಾಯಕ್, ನಾಯಿಯಂತೆ ವರ್ತಿಸುತ್ತಿದ್ದೀರಿ’ ಎಂದೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ADVERTISEMENT

ಈ ಬಗ್ಗೆ ಶೋಭಾಲಕ್ಷ್ಮೀ ಅವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅಸ್ಗರ್‌ನನ್ನು ಠಾಣೆಗೆ ಕರೆಸಿದ ಠಾಣಾಧಿಕಾರಿಯು ಮುಚ್ಚಳಿಕೆ ಬರೆಯಿಸಿಕೊಂಡು‌ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.