ಮೂಡುಬಿದಿರೆ: ಬಡಗಮಿಜಾರು ಗ್ರಾಮದಲ್ಲಿ ನಡೆಯುತ್ತಿರುವ ಬಾಕ್ಸೈಟ್ ಗಣಿಗಾರಿಕೆಯನ್ನು ವಿರೋಧಿಸಿ ಗ್ರಾಮಸ್ಥರು ಸೋಮವಾರ ನಿಡ್ಡೋಡಿ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ‘ಎಂಎಸ್ ರೆಡ್ ಸ್ಟೋನ್ ಟ್ರೇಡಿಂಗ್ ಕಂಪನಿಯು ಗಣಿಗಾರಿಕೆಗೆ ತೆಂಕಮಿಜಾರು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿಲ್ಲ. ಕಂದಾಯ ಮತ್ತು ಗಣಿ ಇಲಾಖೆ ಅನುಮತಿ ನೀಡುವಾಗ ಸರ್ಕಾರದ ನಿಯಮ ಪಾಲಿಸಿಲ್ಲ. ಗಣಿಗಾರಿಕೆಗೆ ಕೈಗಾರಿಕೆ ಎಂಬ ಹೆಸರಿನಲ್ಲಿ ಅನುಮತಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದರು.
‘ನಾನು ಈ ಹಿಂದೆ ಇಲ್ಲಿಗೆ ಫುಡ್ ಪಾರ್ಕ್ ಮಂಜೂರುಗೊಳಿಸಿದ್ದು, ₹ 10 ಕೋಟಿ ಬಿಡುಗಡೆಯಾಗಿತ್ತು. ಈ ಯೋಜನೆಯಿಂದ ಊರಿಗೆ ಪ್ರಯೋಜನಾಗುತಿತ್ತು. ಆದರೆ, ಸ್ಥಳೀಯರ ವಿರೋಧದಿಂದ ಯೋಜನೆ ಅನುಷ್ಠಾನವಾಗಿಲ್ಲ. ಈಗ ಅದೇ ಊರಿಗೆ ಬಾಕ್ಸೈಟ್ ಗಣಿಗಾರಿಕೆ ಬಂದಿದ್ದು, ಸ್ಥಳೀಯರು ಜಾಗ ನೀಡಿದ್ದರಿಂದ ಸಮಸ್ಯೆಯಾಗಿದೆ. ಈ ಗಣಿಗಾರಿಕೆ ವಿರುದ್ಧ ಗ್ರಾಮಸ್ಥರು ಒಟ್ಟಾಗಿ ಹೋರಾಟ ನಡೆಸಿದರೆ ಯಶಸ್ಸು ಸಾಧ್ಯ. ನಿಮ್ಮ ಹೋರಾಟಕ್ಕೆ ಶಾಸಕನಾಗಿ ನನ್ನ ಬೆಂಬಲ ಇದೆ’ ಎಂದರು.
ಆರೋಪ ಹೊರಿಸುವವರು ಮುಂದೆ ಬರಲಿ: ‘ಎಂಎಸ್ ರೆಡ್ ಸ್ಟೋನ್ ಟ್ರೇಡಿಂಗ್ ಕಂಪನಿ ಬಡಗಮಿಜಾರಿನಲ್ಲಿ ಗಣಿಗಾರಿಕೆ ನಡೆಸುವ ಬಗ್ಗೆ ನನ್ನಲ್ಲಿ ತಿಳಿಸಿದಾಗ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಕೊಂಡು ಕಾನೂನು ಪ್ರಕಾರ ಅನುಮತಿ ಸಿಕ್ಕರೆ ಮಾತ್ರ ಗಣಿಗಾರಿಕೆ ನಡೆಸಿ ಎಂದು ತಿಳಿಸಿದ್ದೆ. ಆದರೆ, ಸ್ಥಳೀಯ ಕೆಲವರು ಅವರಿಗೆ ಜಾಗ ಮಾರಾಟ ಮಾಡಿದ್ದರಿಂದ ಗಣಿಗಾರಿಕೆ ನಡೆಸಲು ಮತ್ತು ರಸ್ತೆ ನಿರ್ಮಿಸಲು ಅವಕಾಶ ನೀಡಿದ್ದರಿಂದ ಸಮಸ್ಯೆಯಾಗಿದೆ. ಅವರಲ್ಲಿ ಕೆಲವರು ಈಗ ನಾನು ಹಣ ಪಡೆದುಕೊಂಡಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಮೇಲೆ ಆರೊಪ ಹೊರಿಸಿದವರು ಮುಂದೆ ಬಂದು ಸಾಬೀತುಪಡಿಸಲಿ. ಮೂಡುಬಿದಿರೆ ಕಂಬಳಕ್ಕೆ ಕಂಪನಿಯಿಂದ ದೇಣಿಗೆ ಪಡೆದುಕೊಂಡಿದ್ದು, ಅದಕ್ಕೆ ರಶೀದಿ ನೀಡಲಾಗಿದೆ. ಇದರ ಹೊರತಾಗಿ ಕಂಪನಿ ಜತೆ ನಾನು ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಇಟ್ಟುಕೊಂಡಿಲ್ಲ’ ಎಂದರು.
ನಿಡ್ಡೋಡಿ ದುರ್ಗಾದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾಸ್ಕರ ದೇವಸ್ಯ ಮಾತನಾಡಿ, ನಿಡ್ಡೋಡಿ ಗ್ರಾಮಸ್ಥರು ಒಟ್ಟಾಗಿ ಹೋರಾಟ ನಡೆಸಿ ಉಷ್ಣ ವಿದ್ಯುತ್ ಸ್ಥಾವರವನ್ನು ಹಿಮ್ಮೆಟಿಸಿದ್ದೆವು. ಅದೇ ಮಾದರಿಯಲ್ಲಿ ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಬೇಕು ಎಂದರು.
ಮುಖಂಡರಾದ ಈಶ್ವರ್ ಕಟೀಲ್, ಜನಾರ್ದನ ಗೌಡ ಮಾತನಾಡಿ, ವಿದ್ಯುತ್ ಸಂಪರ್ಕ ನೀಡುವಾಗ ಮೆಸ್ಕಾಂ, ಗಣಿಗಾರಿಕೆಗೆ ಪರವಾನಗಿ ನೀಡುವಾಗ ಗಣಿ ಮತ್ತು ಕಂದಾಯ ಇಲಾಖೆ ಗಣಿಗಾರಿಕೆಗೆ ನಿಯಮ ಉಲ್ಲಂಘಿಸಿದೆ. ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡದೆ ಈ ಕೆಲಸ ಆಗಿದೆ ಎಂದು ಆರೋಪಿಸಿದರು.
ತೆಂಕಮಿಜಾರು ಪಂಚಾಯಿತಿ ಅಧ್ಯಕ್ಷೆ ಶಾಲಿನಿ, ಕಲ್ಲಮುಂಡ್ಕೂರು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಸದಸ್ಯರು, ಬಾರತೀಯ ಕಿಸಾನ್ ಸಂಘದ ಮುಖಂಡ ಶಾಂತಿಪ್ರಸಾದ್ ಹೆಗ್ಡೆ ಪಾಲ್ಗೊಂಡಿದ್ದರು. ಸುಂದರ ಪೂಜಾರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.