ಮಂಗಳೂರು: ‘ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಸುವಾಗ ಉಪಜಾತಿಗಳಲ್ಲದ ‘ಮನ್ಸ’ ಅಥವಾ ‘ದಿಕ್ಕ’ ಪದಗಳನ್ನು ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಗೆ ಮನ್ನಣೆ ನೀಡಬಾರದು’ ಎಂದು ಜಿಲ್ಲಾ ಆದಿ ದ್ರಾವಿಡ ಸಮನ್ವಯ ಸಮಿತಿ ಒತ್ತಾಯಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಎಂ. ಸೀನ ಮಾಸ್ತಿಕಟ್ಟೆ ಅವರು, ಈ ಹಿಂದೆ ಸಂವಿಧಾನ ಬದ್ಧವಾಗಿ ನಿಗದಿಪಡಿಸಿರುವ 101 ಉಪಜಾತಿಗಳ ಪಟ್ಟಿಯ ಪ್ರಕಾರವೇ ಒಳ ಮೀಸಲಾತಿ ಒದಗಿಸಬೇಕು. ‘ಮನ್ಸ’ ಅಥವಾ ‘ದಿಕ್ಕ’ ಇವು ತುಳುನಾಡಿನಲ್ಲಿ ಜಾತಿ ನಿಂದಕ ಪದಗಳು. ಯಾವುದೇ ಸರ್ಕಾರಿ ಕಡತಗಳಲ್ಲಿ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ದಾಖಲೆಗಳಲ್ಲಿ ಈ ಜಾತಿಗಳ ಉಲ್ಲೇಖವಿಲ್ಲ ಎಂದರು.
ಜಾತಿ ಪಟ್ಟಿಗೆ ಸೇರ್ಪಡೆ ಮಾಡುವ ಅಥವಾ ತೆರವುಗೊಳಿಸುವ ಅಧಿಕಾರವು ಲೋಕಸಭೆ ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಇದೆ. ‘ಮನ್ಸ’ ಸಂಘದ ಸಮಿತಿಯ ಅಧ್ಯಕ್ಷರು, ಈ ಸಮುದಾಯವು ಕರಾವಳಿಯಲ್ಲಿ 5 ಲಕ್ಷ ಜನಸಂಖ್ಯೆ ಹೊಂದಿದೆ ಎಂದು ಹೇಳುತ್ತಾರೆ. ಇದನ್ನು ಅವರು ಸಾಬೀತುಪಡಿಸಬೇಕು ಎಂದು ಬಹಿರಂಗ ಸವಾಲು ಹಾಕುತ್ತಿದ್ದೇವೆ. ಇದೇ ರೀತಿ ಗೊಂದಲ ಸೃಷ್ಟಿಸಿದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮೇ 28ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಕರಾವಳಿ ಭಾಗದ ಆದಿ ದ್ರಾವಿಡ ಸಮಾಜದವರು ಈ ಜಾತಿ ನಿಂದಕ ಪದಗಳ ಸೇರ್ಪಡೆ ಬೇಡಿಕೆಯ ಬಗ್ಗೆ ಆಕ್ರೋಶ ಗೊಂಡಿದ್ದಾರೆ. ಇದು ಆದಿ ದ್ರಾವಿಡ ಸಮುದಾಯಕ್ಕೆ ಮಾಡುವ ಅನ್ಯಾಯವಾಗಿದೆ ಎಂದರು.
ಸಂಘಟನೆಯ ಎಸ್.ಪಿ. ಆನಂದ, ಜಿನ್ನಪ್ಪ ಬಂಗೇರ, ಸುರೇಶ್ ಬಲ್ಲಾಳ್‌ಬಾಗ್, ಜಗದೀಶ್ ಪಾಂಡೇಶ್ವರ, ಲಕ್ಷ್ಮಣ, ನವೀನ್ ಬಲ್ಲಾಳ್‌ಬಾಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.