ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಇರಾ ಕೋಡಿಯಲ್ಲಿ ಇದೇ 27ರಂದು (ಮಂಗಳವಾರ) ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲುವಿನ ರಹಿಮಾನ್ ಅವರನ್ನು ಹತ್ಯೆ ಮಾಡಿದ ಹಾಗೂ ಅವರ ಜೊತೆಗಿದ್ವ ಕಲಂಧರ್ ಶಾಫಿ ಮೇಲೆ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲ್ಯೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ಮನೆಯ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿ ನಗರ ಭದ್ರಾಕಾಳಿ ದೇವಸ್ಥಾನ ಹತ್ತಿರದ ನಿವಾಸಿ ಪೃಥ್ವಿರಾಜ್ (21) ಹಾಗೂ ಬಂಟ್ವಾಳದ ನಿವಾಸಿ ಚಿಂತನ್ (19) ಬಂಧಿತರು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ತಿಳಿಸಿದ್ದಾರೆ.
‘ಬೈಕಿನಲ್ಲಿ ಬಂದು ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ಮಾಡಿದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬಂಧಿತರಾಗಿರುವ ಮೂವರೂ ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ’ ಎಂದು ಯತೀಶ್ ಎನ್. ತಿಳಿಸಿದರು.
‘ಆರೋಪಿಗಳ ಪತ್ತೆಗಾಗಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ಅವರ ನೇತೃತ್ವದಲ್ಲಿ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಪಗತಿಯಲ್ಲಿದೆ‘ ಎಂದು ಅವರು ಮಾಹಿತಿ ನೀಡಿದರು.
ಕಟ್ಟಡದ ಕೆಲಸಕ್ಕೆ ತುರ್ತಾಗಿ ಒಂದು ಲೋಡ್ ಮರಳು ತರುವಂತೆ ಅಬ್ದುಲ್ ರಹಿಮಾನ್‌ಗೆ ದೀಪಕ್ ಕರೆ ಮಾಡಿದ್ದ. ಮರಳನ್ನು ಪಿಕಪ್ ವಾಹನದಲ್ಲಿ ತಂದು ಇಳಿಸುವಾಗ ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ನಡೆದಿತ್ತು. ಬೈಕಿನಲ್ಲಿ ಬಂದ ಇಬ್ಬರು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೊಲೆ ಸಂಚಿನಲ್ಲಿ ಬಂಧಿತ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಬ್ದುಲ್ ರಹಿಮಾನ್ ಕೊಲೆ ಮತ್ತು ಅವರ ಜೊತೆಗಿದ್ದ ಕಲಂದರ್ ಶಾಫಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.