ADVERTISEMENT

‘ಶಿಕ್ಷಣದ ಪ್ರಾಮುಖ್ಯತೆ ಅರಿತು ಕೆಲಸ ಮಾಡಿ’

ರಾಷ್ಟ್ರೀಯ ವಿದ್ಯಾರ್ಥಿ ದಿನ: ಎಬಿವಿಪಿಯಿಂದ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 17:00 IST
Last Updated 9 ಜುಲೈ 2020, 17:00 IST
ಮಂಗಳೂರಿನ ಎಬಿವಿಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಲ್ಲಿ ಕೇಶವ ಬಂಗೇರ ಮಾತನಾಡಿದರು
ಮಂಗಳೂರಿನ ಎಬಿವಿಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಲ್ಲಿ ಕೇಶವ ಬಂಗೇರ ಮಾತನಾಡಿದರು   

ಮಂಗಳೂರು: ವಿದ್ಯಾರ್ಥಿಗಳು ಎಬಿವಿಪಿಯ ಧ್ಯೇಯವಾಕ್ಯಗಳಾದ ಜ್ಞಾನ, ಶೀಲ, ಏಕತೆ ಪ್ರಾಮುಖ್ಯತೆಯನ್ನು ಅರಿತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್‌ ಕತ್ತಲ್‌ಸಾರ್‌ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದ ವತಿಯಿಂದ 72ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ಶಾಂತರಾಮ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಬಹಳ ಪ್ರಮುಖವಾದದ್ದು. ಅಂತಹ ಶಿಸ್ತನ್ನು ಎಬಿವಿಪಿ ಕಲಿಸುತ್ತದೆ. ವಿದ್ಯಾರ್ಥಿಗಳ ಮನಸ್ಸನ್ನು ರಾಷ್ಟ್ರೀಯ ಚಿಂತನೆಗಳಿಗೆ ಆಕರ್ಷಿಸುವಂತೆ ಕಾರ್ಯಕ್ರಮಗಳನ್ನು ನಡೆಸುತ್ತದೆ ಎಂದರು.

ADVERTISEMENT

ಮಂಗಳೂರು ವಿಭಾಗ ಪ್ರಮುಖ ಕೇಶವ ಬಂಗಾರ ಮಾತನಾಡಿ, ಪಕ್ಷ ರಾಜಕಾರಣಕ್ಕಿಂತ ರಾಷ್ಟ್ರ ರಾಜಕಾರಣ ಮೇಲು. ಇಂತಹ ಘೋಷವಾಕ್ಯದೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಎಂದು ತಿಳಿಸಿದರು.

ಲಾಕ್‌ಡೌನ್ ಸಮಯದಲ್ಲಿ ಎಬಿವಿಪಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಮಾಜಿಕ ಜಾಲತಾಣದ ಮೂಲಕ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆ ‘ತುಳುನಾಡ ಕಲಾವೈಭವ’ದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಎಬಿವಿಪಿ ಕಾರ್ಯಾಲಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ರಕ್ತದಾನ ಮಾಡಿದರು.

ಮಂಗಳೂರು ಸಂಚಾಲಕ ಆಶಿಶ್ ಅಜ್ಜಿಬೆಟ್ಟು ಧ್ವಜಾರೋಹಣ ನೆರವೇರಿಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ದೀಪ್ತಿ ಮಡಿವಾಳ, ನಗರ ಸಹಕಾರ್ಯದರ್ಶಿ ನಿಶಾನ್ ಆಳ್ವ ವೇದಿಕೆಯಲ್ಲಿದ್ದರು. ನಗರ ಸಹ ಕಾರ್ಯದರ್ಶಿ ಅಕ್ಷಯ್ ಕಾಮಜೆ ನಿರೂಪಿಸಿದರು. ನಗರ ಸಹ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಸ್ವಾಗತಿಸಿದರು. ಎಬಿವಿಪಿ ಕಾರ್ಯಕರ್ತರಾದ ಸಂಜನ್ ರಾಜ್, ಸಾಗರ್, ಪ್ರವೀಣ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.