ADVERTISEMENT

ಚಾರ್ಮಾಡಿ| ಬೈಕ್‌ಗಳ ನಡುವೆ ಡಿಕ್ಕಿ: ರಸ್ತೆಗೆ ಬಿದ್ದ ಸವಾರನ ಮೇಲೆ ಹರಿದ ಟ್ರಕ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 2:18 IST
Last Updated 9 ಜೂನ್ 2022, 2:18 IST
ನಝೀರ್
ನಝೀರ್   

ಬೆಳ್ತಂಗಡಿ: ಮಂಗಳವಾರ ರಾತ್ರಿ ಚಾರ್ಮಾಡಿ ಪಂಡಿಕಟ್ಟೆ ಬಳಿ ಬೈಕ್‌ಗಳ ನಡುವೆ ಸಂಭವಿಸಿದ ಡಿಕ್ಕಿಗೆ ರಸ್ತೆ ಬಿದ್ದ ಸವಾರನ ಮೇಲೆ ಟ್ರಕ್‌ ಹಾದು ಹೋದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾರ್ಮಾಡಿ ಮೇಗಿನಮನೆ ನಿವಾಸಿ ಇಸ್ಮಾಯಿಲ್ ಪುತ್ರ ನಝೀರ್ ಮೇಗಿನಮನೆ (21) ಮೃತಪಟ್ಟ ಯುವಕ. ಸ್ನೇಹಿತನ ಮನೆಯಿಂದ ಹಿಂದಿರುಗುತ್ತಿದ್ದ ವೇಳೆ ಎದುರು ಬದಿಯಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ನಝೀರ್ ರಸ್ತೆಯ ಮೇಲೆ ಬಿದ್ದಿದ್ದರು. ಇದೇ ವೇಳೆ ಹಿಂಬದಿಯಿಂದ ಬಂದ ಟ್ರಕ್ ಮೈಮೇಲೆ ಚಲಿಸಿದೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತ: ಇಬ್ಬರು ಗಂಭೀರ

ADVERTISEMENT

ಬೆಳ್ತಂಗಡಿ: ಉಜಿರೆಯ ನಿಡಿಗಲ್ ಶಾಲೆಯ ಕ್ರಾಸ್ ಬಳಿ ಮಂಗಳವಾರ ಮಧ್ಯರಾತ್ರಿ ಬೈಕ್ - ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸವಾರರಿಬ್ಬರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಪಲ್ಸರ್ ಬೈಕ್ ಹಾಗೂ ಉಜಿರೆಯಿಂದ ನೆರಿಯ ಕಡೆಗೆ ಹೋಗುತ್ತಿದ್ದ ಸ್ಕೂಟರ್ ನಡುವೆ ಅಪಘಾತ ನಡೆದಿದೆ‌. ಪಲ್ಸರ್ ಬೈಕ್ ಸವಾರ ದಾವಣಗೆರೆ ನಿವಾಸಿ ಸಂತೋಷ್ (32) ಮತ್ತು ಸಹಸವಾರ ಚಾರ್ಮಾಡಿ ಘಾಟ್ ಮಾರ್ಗವಾಗಿ, ಉಜಿರೆ ಕಡೆಗೆ ಬರುತ್ತಿದ್ದರು. ನೆರಿಯ ನಿವಾಸಿ ನಿತೇಶ್(25) ಮತ್ತು ಸಹಸವಾರ ಹರೀಶ್(25) ಉಜಿರೆ ಕಡೆಯಿಂದ ನೆರಿಯ ಕಡೆಗೆ ಹೋಗುತ್ತಿದ್ದರು. ಪ್ರಕರಣ ದಾಖಲಾಗಿದೆ.

ಯುವಕ ಆತ್ಮಹತ್ಯೆ

ಪುತ್ತೂರು: ತಾಲ್ಲೂಕಿನ ಕೆಯ್ಯೂರು ಗ್ರಾಮದ ದೇರ್ಲ ಎಂಬಲ್ಲಿ ಯುವಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ (32) ಆತ್ಮಹತ್ಯೆ ಮಾಡಿಕೊಂಡವರು.

ಮೂರು ತಿಂಗಳುಗಳ ಹಿಂದೆ ಕೆಯ್ಯೂರಿನಲ್ಲಿ ಸಂಭವಿಸಿದ್ದ ಅಫಘಾತದಲ್ಲಿ ಗಣೇಶ್ ಅವರ ಅಣ್ಣ ಪ್ರವೀಣ್ ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಗಣೇಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಪೊಲೀಸರ ವಶಕ್ಕೆ

ಸುಳ್ಯ: ಇಲ್ಲಿನ ಪಟ್ಟಣದ ಮೊಗರ್ಪಣೆಯಲ್ಲಿ ಜೂನ್‌ 5ರಂದು ರಾತ್ರಿ ನಡೆದ ಶೂಟೌಟ್ ಪ್ರಕರಣದ ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಲ್ಲಿನ ಜಯನಗರದ ಮಹಮ್ಮದ್ ಶಾಹಿ ಎಂಬುವರು ಮೊಗರ್ಪಣೆ ವೆಂಕಟರಮಣ ಸೊಸೈಟಿಯ ಬಳಿ ಕಾರಿಗೆ ಹತ್ತುತ್ತಿರುವ ಸಂದರ್ಭದಲ್ಲಿ ವಾಹನದಲ್ಲಿ ಬಂದ ಅಪರಿಚಿತರು ಶೂಟ್ ಮಾಡಿ ಹೋಗಿದ್ದರು. ಗುಂಡು ಅವರಿಗೆ ತಾಗದೆ ಕಾರಿಗೆ ತಾಗಿ ಕಾರು ಜಖಂ ಆಗಿತ್ತು. ಈ ಹಿಂದೆ ನಡೆದಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ, ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಶೂಟೌಟ್ ನಡೆಸಿದ ಶಂಕೆಯ ಮೇರೆಗೆ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.