ADVERTISEMENT

ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ್ದ ಬಾಲಕಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 5:51 IST
Last Updated 1 ಏಪ್ರಿಲ್ 2022, 5:51 IST

ಮಂಗಳೂರು: ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆ ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು ₹30 ಸಾವಿರ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಸುರತ್ಕಲ್ ಸಮೀಪದ ಸಸಿಹಿತ್ಲು ನಿವಾಸಿ ವಾಮನ ಪೂಜಾರಿ ಶಿಕ್ಷೆಗೆ ಒಳಗಾದ ಅಪರಾಧಿ.

2016 ಸೆಪ್ಟೆಂಬರ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದಾಗ, ಆರೋಪಿ ವಾಮನ ಪೂಜಾರಿ ಅತ್ಯಾಚಾರ ಎಸಗಿದ್ದ, ವಿಷಯ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದ. ಆ ಬಳಿಕ ಪದೇ ಪದೇ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು, ಇದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. 2017 ಮಾ. 29 ರಂದು ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಡಿಎನ್‌ಎ ಪರೀಕ್ಷೆ ನಡೆಸಿದಾಗ ಆರೋಪಿ ವಾಮನ ಪೂಜಾರಿ ಆ ಮಗುವಿನ ಜೈವಿಕ ತಂದೆ ಎನ್ನುವುದು ಸಾಬೀತಾಗಿತ್ತು. ಸುರತ್ಕಲ್ ಸಬ್ ಇನ್‌ಸ್ಪೆಕ್ಟರ್‌ ಎಚ್.ಎಂ. ಪೂವಪ್ಪ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇನ್‌ಸ್ಪೆಕ್ಟರ್ ಚೆಲುವರಾಜು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ , ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

ಪೋಕ್ಸೊ ಕಾಲಂ 6 ರ ಅಡಿ 10 ವರ್ಷ ಕಠಿಣ ಶಿಕ್ಷೆ ಮತ್ತು ₹30 ಸಾವಿರ ದಂಡ, ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಸದಾ ಶಿಕ್ಷೆ ವಿಧಿಸಲಾಗಿದೆ. ಕೊಲೆ ಬೆದರಿಕೆ ಆರೋಪಕ್ಕೆ ೧ ವರ್ಷ ಸಾದಾ ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ ₹4 ಲಕ್ಷ ಸರ್ಕಾರದಿಂದ ಕೊಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ವಾದ ಮಂಡಿಸಿದ್ದರು.

ರಸ್ತೆ ಅಪಘಾತ: 1 ವರ್ಷ ಶಿಕ್ಷೆ

ಮಂಗಳೂರು: ನೀರುಮಾರ್ಗದಲ್ಲಿ ಬಸ್ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 7ನೇ ಜೆಎಂಎಫ್‌ಸಿ ನ್ಯಾಯಾಲಯವು, ಅಪರಾಧಿಗೆ 1ವರ್ಷ 6 ತಿಂಗಳ ಶಿಕ್ಷೆ ವಿಧಿಸಿದೆ. ಧನರಾಜ್ ಶಿಕ್ಷೆಗೊಳಗಾದ ಅಪರಾಧಿ.

2019 ರ ಮಾ.27 ರಂದು ಸಂಜೆ ನೀರುಮಾರ್ಗ ಬ್ಯಾಂಕ್ ಎಟಿಎಂ ಬಳಿ ರೋಶನಿ ಟ್ರಾವೆಲ್ಸ್ ಬಸ್, ಪಾದಚಾರಿ ಮಾಧವ ಮೊಯಿಲಿ ಅವರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಮಾಧವರು ಚಿಕಿತ್ಸೆಗೆ ಸ್ಪಂದಿಸದೇ ಮಾ.29 ರಂದು ಮೃತಪಟ್ಟಿದ್ದರು.

ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ ಕೃಷ್ಣಾನಂದ ಜಿ. ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 7ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪದ್ಮಾ ಎಂ., ಅಪರಾಧಿಗೆ ₹1 ಸಾವಿರ ದಂಡ ಅಥವಾ ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹ ವಾಸ ಹಾಗೂ ಐಪಿಸಿ 304 ರ ಅಡಿ 1 ವರ್ಷ 6 ತಿಂಗಳು ಸಾಮಾನ್ಯ ಶಿಕ್ಷೆ ಜತೆಗೆ ₹5ಸಾವಿರ ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿದ್ದಾರೆ. ಪ್ರಭಾರ ಹಿರಿಯ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.