ಮಂಗಳೂರು: ‘ಕೊರಗರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಮಹಮ್ಮದ್ ಪೀರ್ 30 ವರ್ಷಗಳ ಹಿಂದೆ ಸಲ್ಲಿಸಿದ್ದ ವರದಿಯತ್ತ ಯಾವ ಸರ್ಕಾರವೂ ಗಮನಹರಿಸಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವಾದರೂ ಈ ವರದಿಯ ಶಿಫಾರಸು ಜಾರಿ ಮಾಡಲಿ’ ಎಂದು ಕೊರಗ ಸಮುದಾಯದ ಮುಖಂಡ ಕರಿಯ ಕೆ. ಆಗ್ರಹಿಸಿದರು.
ಆದಿವಾಸಿ ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಇಲ್ಲಿ ಗುರುವಾರ ಏರ್ಪಡಿಸಿದ್ದ ಆದಿವಾಸ್ ಆಕ್ರೋಶ್ ರ‍್ಯಾಲಿ ಹಾಗೂ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಿತಿಯ ರಾಜ್ಯ ಘಟಕದ ಸಹಸಂಚಾಲಕ ಶ್ರೀಧರ ನಾಡ ‘ಹಿಂದಿನ ಸರ್ಕಾರ ಕೊರಗರ ಅಭಿವೃದ್ಧಿಗೆ ಮೀಸಲಿಟ್ಟ ಬಜೆಟ್ ಅನುದಾನವನ್ನು ಕಡಿತಗೊಳಿಸಿತ್ತು. ಅನುದಾನ ಹೆಚ್ಚಿಸಲು ಈಗಿನ ಸರ್ಕಾರವೂ ಕ್ರಮವಹಿಸಿಲ್ಲ’ ಎಂದರು
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ಕಂಬಳ ನಡೆಸುವವರು ಕಟ್ಟುವ ಮುಂಡಾಸು ಹಾಗೂ ಕೈಯಲ್ಲಿ ಹಿಡಿಯುವ ಬೆತ್ತ ದೌರ್ಜನ್ಯದ ಸಂಕೇತ. ಈಚೆಗೆ ಕಂಬಳದ ಉದ್ಘಾಟನೆಗೆ ವಿಮಾನದಲ್ಲಿ ಜಿಲ್ಲೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಂಬಳ ಆಯೋಜಕರು ಮುಂಡಾಸು ಕಟ್ಟಿ, ಕೈಯಲ್ಲಿ ಬೆತ್ತ ನೀಡಿದ್ದಾರೆ. ಆಧುನಿಕ ಕಾಲಘಟ್ಟದ ಆರ್ಥಿಕ ನೀತಿಗಳು ಬೆತ್ತದೇಟು ಬಾರಿಸಲು ಸಜ್ಜಾಗಿವೆ. ಮುಂಡಾಸು ಮತ್ತು ಬೆತ್ತದ ಬೆದರಿಕೆಗೆ ಸೆಡ್ಡು ಹೊಡೆದು ತಲೆ ಎತ್ತಿ ನಿಲ್ಲುವ ಸಂಕಲ್ಪವನ್ನು ಕೊರಗರು ಮಾಡಿದ್ದಾರೆ’ ಎಂದರು.
ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‌ನ ರಾಷ್ಟ್ರೀಯ ಉಪಾಧ್ಯಕ್ಷೆ ಬೃಂದಾ ಕಾರಟ್, ಸಮಿತಿಯ ರಾಜ್ಯ ಘಟಕದ ಸಂಚಾಲಕ ಎಸ್.ವೈ.ಗುರುಶಾಂತ್ ಮಾತನಾಡಿದರು.
ಸಮಿತಿಯ ರಾಜ್ಯ ಸಹಸಂಚಾಲಕ ಕೃಷ್ಣಪ್ಪ ಕೊಂಚಾಡಿ, ಶೇಖರ ವಾಮಂಜೂರು, ಕೃಷ್ಣಾ ಇನ್ನಾ, ರಶ್ಮಿ, ವಿಕಾಸ್, ರವೀಂದ್ರ ವಾಮಂಜೂರು, ತುಳಸಿ ಬೆಳ್ಮಣ್ಣು, ಶಶಿಧರ್ ಕೆರೆಕಾಡು, ನಿತೇಶ್ ಗುಂಡಾವುಪದವು, ಜಯ ಮಧ್ಯ, ಕೇಶವ ಕೆರೆಕಾರು, ಅಭಿಜಿತ್, ಕಿರಣ್ ಕತ್ತಲ ಸಾರ್, ಭಾಗೇಶ್ ಮೆಣ್ಣಬೆಟ್ಟು, ಆಶಿಕ್ ಮೆಣ್ಣಬೆಟ್ಟು, ಪ್ರಶಾಂತ್ ಕಂಕನಾಡಿ, ಪದ್ಮನಾಭ ಮಧ್ಯ ಹಾಗೂ ಜ್ಯೋತಿ ಮಧ್ಯ ಭಾಗವಹಿಸಿದರು.
Highlights - ಕೊರಗ ಸಮುದಾಯದ ಬೇಡಿಕೆಗಳು ಕೊರಗರಿಗೆ ಒಳಮೀಸಲಾತಿ ಕಲ್ಪಿಸಿ ಶಿಕ್ಷಣ, ಉದ್ಯೋಗ, ಆರೋಗ್ಯಕ್ಕೆ ವಿಶೇಷ ಪ್ಯಾಕೇಜ್ ಜಾರಿಗೊಳಿಸಿ ಪೌರಕಾರ್ಮಿಕರ ಸೇವೆ ಕಾಯಂಗೊಳಿಸಿ ಸರ್ಕಾರಿ, ಅರೆಸರ್ಕಾರಿ, ಸಹಕಾರಿ ಹುದ್ದೆಗಳ ಕೊರಗರಿಗೆ ಆದ್ಯತೆ ನೀಡಿ
Cut-off box - ಗಮನ ಸೆಳೆದ ಕೊರಗರ ರ‍್ಯಾಲಿ ನಗರದ ಬಾವುಟಗುಡ್ಡೆಯಿಂದ ಗಡಿಯಾರ ಗೋಪುರದವರೆಗೆ ನಡೆದ ಆದಿವಾಸ್ ಆಕ್ರೋಶ್ ರ‍್ಯಾಲಿಯಲ್ಲಿ ದಕ್ಷಿಣ ಕನ್ನಡ ಉಡುಪಿ ಹಾಗೂ ಆಸುಪಾಸಿನ ಜಿಲ್ಲೆಗಳ ಕೊರಗ ಸಮುದಾಯದವರು ಭಾಗವಹಿಸಿದರು. ಕೈಯಲ್ಲಿ ತಮ್ಮ ಮನೆಯ ಪೋಟೊಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುವ ಮೂಲಕ ಯಾವ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ತೋರಿಸಿದರು. ಟರ್ಪಾಲು ಹೊದಿಸಿದ ಬೀಳುವ ಸ್ಥಿತಿಯಲ್ಲಿದ್ದ ಮನೆಯ ಚಿತ್ರಗಳು ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟವು. ಕೆಲವರು ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಭಾಗವಹಿಸಿದರು. ಡೊಳ್ಳು ಈಟಿ ಭರ್ಜಿ ಬೆತ್ತದಿಂದ ತಯಾರಿಸುವ ಕೃಷಿ ಹಾಗೂ ಗೃಹೋಪಯೋಗಿ ಪರಿಕರಗಳನ್ನೂ ರ‍್ಯಾಲಿಯಲ್ಲಿ ಪ್ರದರ್ಶಿಸಿದರು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.