ADVERTISEMENT

ದೇಸಿ ನಾಯಿ, ಬೆಕ್ಕಿಗೆ ದತ್ತು ಸೌಭಾಗ್ಯ

ಅಲೋಶಿಯಸ್ ಪತ್ರಿಕೋದ್ಯಮ ವಿಭಾಗ, ಲವ್‌ 4 ಪಾವ್ಸ್ ಟ್ರಸ್ಟ್‌

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 19:46 IST
Last Updated 18 ಆಗಸ್ಟ್ 2019, 19:46 IST
ನಾಯಿ ಮರಿಗಳನ್ನು ದತ್ತು ಪಡೆದಿರುವುದು
ನಾಯಿ ಮರಿಗಳನ್ನು ದತ್ತು ಪಡೆದಿರುವುದು   

ಮಂಗಳೂರು: ಅದೊಂದು ಮನಮಿಡಿಯುವ ಕಾರ್ಯಕ್ರಮ. ಬೀದಿ ಪಾಲಾಗಿದ್ದ ನಾಯಿ–ಬೆಕ್ಕುಗಳಿಗೆ ಅಲ್ಲಿ ‘ಮರುಜೀವ’ ಸಿಕ್ಕ ಸಂಭ್ರಮವಾದರೆ, ದತ್ತು ಪಡೆದವರಿಗೆ ಮುದ್ದುಮರಿಯು ಮಡಿಲೇರಿದ ಸಂತಸ.ಪ್ರಾಣಿಪ್ರಿಯರ ಮಾನವೀಯತೆಯು ಮನ ಕರಗುವಂತಿತ್ತು.

ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಪತ್ರಿಕೋದ್ಯಮ ವಿಭಾಗವು ಲವ್‌ 4 ಪಾವ್ಸ್ ಟ್ರಸ್ಟ್‌ ಸಹಯೋಗದಲ್ಲಿ ನಗರದ ವೆಲೆನ್ಸಿಯದ ರೋಶನಿ ನಿಲಯ ಸಮಾಜ ಕಾರ್ಯ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ’ದ ಕ್ಷಣಗಳು.

ಬೀದಿ ಬದಿಗಳಲ್ಲಿ ಅನಾಥವಾಗಿ ಒಡಾಡಿಕೊಂಡಿದ್ದ ನಾಯಿ, ಬೆಕ್ಕು ಮರಿಗಳನ್ನು ರಕ್ಷಿಸಿ, ಪೋಷಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿದ್ದ ಆಯೋಜಕರು, ಭಾನುವಾರ ಇಲ್ಲಿ ಉಚಿತವಾಗಿ ದತ್ತು ನೀಡಿದರು. ಪತ್ರಿಕೋದ್ಯಮ ವಿಭಾಗದ ತೃತಿಯ ವರ್ಷದ ವಿದ್ಯಾರ್ಥಿಗಳು ಸಹಕಾರ ನೀಡಿದರು.

ADVERTISEMENT

ಸಾಕು ಪ್ರಾಣಿಗಳು ಬೀದಿ ಪಾಲಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಯಾವುದೇ ಫಲಾಪೇಕ್ಷೆ ಇಲ್ಲದೇ ಸಾಕು ಪ್ರಾಣಿಗಳಿಗೆ ಕರುಣೆ ತೋರಿದ ಟ್ರಸ್ಟ್‌, ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಾರ್ಯವನ್ನು ಸ್ಥಳಕ್ಕೆ ಬಂದ ಜನತೆ ಶ್ಲಾಘಿಸಿದರು.

ಪ್ರಾಣಿ ರಕ್ಷಕ ಹಾಗೂ ಸಾಮಾಜಿಕ ಕಾರ್ಯಕರ್ತ ತೌಸೀಫ್ ಅಹ್ಮದ್ ಮಾತನಾಡಿ, ‘ಹಬ್ಬಗಳಲ್ಲಿ ಅದೆಷ್ಟೋ ಪ್ರಾಣಿಗಳು ಬಲಿಯಾಗುತ್ತವೆ. ಮಾನವನ ದುರಾಸೆ ಇದ್ದಕ್ಕೆಲ್ಲ ಕಾರಣ. ಪ್ರಾಣಿಗಳನ್ನು ನಾವು ಪ್ರೀತಿಸಬೇಕು. ಅದಕ್ಕೂ ಬದುಕುವ ಹಕ್ಕಿದೆ’ ಎಂದರು.

ಬಳಿಕ ಲವ್ 4 ಪಾವ್ಸ್ ಟ್ರಸ್ಟ್‌ನ ಉಷಾ ಸುವರ್ಣ ಮಾತನಾಡಿ, ‘ನಾಯಿ ಬೀದಿ ಪಾಲಾಗುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ. ಅನೇಕ ಪ್ರಾಣಿಗಳಿಗೆ ಆಹಾರ, ವಸತಿ ಇಲ್ಲದೇ ಸಾಯುವ ಪರಿಸ್ಥಿತಿ ಬಂದಿದೆ. ಇದಕ್ಕೆ ಸೂಕ್ತವಾದ ನೆಲೆಯನ್ನು ಕಲ್ಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಈವರೆಗೆ 5 ಉಚಿತ ದತ್ತು ಶಿಬಿರವನ್ನು ಅಯೋಜನೆ ಮಾಡಿ ಯಶಸ್ವಿಯಾಗಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.